ಹುಬ್ಬಳ್ಳಿ: ಹತ್ಯೆಯಾದ ಯುವತಿ ಅಂಜಲಿ ಸಹೋದರಿ ಆತ್ಮಹತ್ಯೆಗೆ ಯತ್ನ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಹುಬ್ಬಳ್ಳಿ: ಕೆಲದಿನಗಳ ಹಿಂದೆ ಪ್ರೀತಿಗೆ ಸಹಕರಿಸಲಿಲ್ಲ ಎಂದು ಯುವಕನಿಂದ ಕೊಲೆಯಾದ ಯುವತಿ ಅಂಜಲಿ ಅಂಬಿಗೇರ ಸಹೋದರಿ ಯಶೋಧ ಅಕ್ಕನ ಸಾವಿನಿಂದ ಮನನೊಂದು ಪಿನಾಯಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕೂಡಲೆ ಅವರನ್ನು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯಶೋಧ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ನಿನ್ನೆ ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ, ದಿಂಗಾಲೇಶ್ವರ ಶ್ರೀ, ಮನಸೂರಿನ ಬಸವರಾಜ ದೇವರು ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಮತ್ತು ಸಾರ್ವಜನಿಕರು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಯಶೋಧ ಕೂಡ ಭಾಗಿಯಾಗಿದ್ದಳು. ಪ್ರತಿಭಟನೆ ವೇಳೆ ಯಶೋಧ ಪ್ರಜ್ಞೆ ತಪ್ಪಿ ಬಿದ್ದಿದ್ದರು.ಕೂಡಲೆ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು. ಮನೆಗೆ ಹೋದ ಯಶೋಧ ರಾತ್ರಿ ಪಿನಾಯಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಇಂತಹ ಪಾಪಿ ಮಗ ಯಾರಿಗೂ ಬೇಡ ವಿಶ್ವ ತಾಯಿ: ಇಂತಹ ಪಾಪಿ ಮಗ ಯಾರಿಗೂ ಬೇಡ. ನನಗೆ ಇವನೊಬ್ಬನೇ ಮಗ, ಏನು ಕೆಲಸ ಮಾಡುತ್ತಿದ್ದ ಗೊತ್ತಿಲ್ಲ. ನ್ಯಾಯಾಲಯ ಅವನಿಗೆ ಏನು ಶಿಕ್ಷೆ ಕೊಡುತ್ತದೆ ಕೊಡಲಿ. ನನ್ನ ಮಗ ವಿಶ್ವ ಮಾಡಿದ ತಪ್ಪಿಗೆ ನಾವೆಲ್ಲ ಶಿಕ್ಷೆ ಅನುಭವಿಸುತ್ತಿದ್ದೇವೆ. ಮೊದಲು ವಿಶ್ವ ಚೆನ್ನಾಗಿದ್ದ, ನಾಲ್ಕು ವರ್ಷದ ನಂತರ ಹೀಗೆ ಆಗಿದ್ದಾನೆ. ಅಂತಹ ಮಗ ನನಗೆ ಬೇಡ, ಅವನನ್ನು ನೋಡಲು ಹೋಗುವುದಿಲ್ಲ ಎಂದು ಆರೋಪಿ ವಿಶ್ವ ತಾಯಿ ಸವಿತಾ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ