
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಇಂದು ಮೇ 20ಕ್ಕೆ ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಕಳೆದ ಒಂದು ವರ್ಷದಲ್ಲಿ ಸರ್ಕಾರ ಮಾಡಿರುವ ಕೆಲಸಗಳೇನು, ಅದರ ಸಾಧನೆಗಳೇನು, ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದು, ಸರ್ಕಾರದ ಮೀಸಲಾತಿ ಇತ್ಯಾದಿಗಳ ಕುರಿತು ಸಿಎಂ ಸಿದ್ದರಾಮಯ್ಯ ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದಾರೆ.
ಕಳೆದ ವರ್ಷ 2023ರ ವಿಧಾನಸಭೆ ಚುನಾವಣೆ ಪೂರ್ವ ಐದು ಪ್ರಮುಖ ಗ್ಯಾರಂಟಿಗಳ ಭರವಸೆಗಳನ್ನು ರಾಜ್ಯದ ಜನತೆಗೆ ನೀಡಿದ್ದೆವು. ಕಾಂಗ್ರೆಸ್ ಬಹುಮತ ಗಳಿಸಿ ಅಧಿಕಾರಕ್ಕೆ ಬಂದ ತಕ್ಷಣ ವಿಳಂಬ ಮಾಡದೇ ಅದನ್ನು ಜಾರಿ ಮಾಡಿ ಕೊಟ್ಟ ಮಾತನ್ನು ಈಡೇರಿಸಿದ್ದೇವೆ. ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಫಲಾನುಭವಿಗಳಿಗೆ ಐದು ಗ್ಯಾರಂಟಿಗಳನ್ನು ತಲುಪಿಸಿದ್ದೇವೆ. ಐದು ಗ್ಯಾರಂಟಿಗಳನ್ನು ನೀಡಲು 36 ಸಾವಿರ ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಸಹಕರಿಸಲಿಲ್ಲ: ಅನ್ನಭಾಗ್ಯ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಸಹಕರಿಸಲಿಲ್ಲ. ಭಾರತದ ಆಹಾರ ನಿಗಮ (FCI)ನಲ್ಲಿ ದಾಸ್ತಾನು ಇದ್ದರೂ ಅಕ್ಕಿ ಕೊಡಲು ನಿರಾಕರಿಸಿದರು. ಭಾರತದ ಆಹಾರ ನಿಗಮ ಡೆಪ್ಯುಟಿ ಮ್ಯಾನೇಜರ್ನ ಕರೆದು ಮಾತಾಡಿದೆ. ಒಂದು ಕೆಜಿ ಅಕ್ಕಿಗೆ 34 ರೂಪಾಯಿ ಕೊಡುತ್ತೇವೆ ಎಂದು ಬರವಣಿಗೆ ಮೂಲಕ ಕೊಟ್ಟೆವು. ಆದರೂ ಅಕ್ಕಿ ಕೊಡಲಿಲ್ಲ. ನಂತರ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ಬಳಿ ಅಕ್ಕಿ ನೀಡುವಂತೆ ಮನವಿ ಮಾಡಿದೆವು. ಆದರೂ ಅಕ್ಕಿ ಸಿಗಲಿಲ್ಲ. ಸಂಪುಟದಲ್ಲಿ ಅಕ್ಕಿ ಬದಲಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕುವುದು ಅಂತ ನಿರ್ಣಯ ಆಯ್ತು. ಬಳಿಕ ಕಳೆದ ವರ್ಷ ಜುಲೈನಿಂದ ಹಣ ಕೊಡಲು ಆರಂಭಿಸಿದೆವು ಎಂದು ಅನ್ನಭಾಗ್ಯ ಯೋಜನೆ ಬಗ್ಗೆ ವಿವರಿಸಿದರು.
ಗೃಹಲಕ್ಷ್ಮಿ ಯೋಜನೆ: ಕಳೆದ ವರ್ಷ ಆಗಸ್ಟ್ನಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂತು. ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ಕೊಡುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದ 9 ತಿಂಗಳೊಳಗೆ 5 ಗ್ಯಾರಂಟಿ ಜಾರಿಯಾಗಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ 1 ಕೋಟಿ 20 ಲಕ್ಷ ಮನೆ ಯಜಮಾನಿಯರಿಗೆ ನೇರವಾಗಿ ಖಾತೆಗಳಿಗೆ ಹಣ ಹಾಕಲಾಗುತ್ತಿದೆ ಎಂದರು. ಗೃಹ ಜ್ಯೋತಿ ಅಡಿಯಲ್ಲಿ 1 ಕೋಟಿ 60 ಲಕ್ಷ ಜನರಿಗೆ ಫ್ರೀ ಕರೆಂಟ್ ಕೊಡುತ್ತಿದ್ದೇವೆ. ಜೂ.11 ರಂದು ಶಕ್ತಿ ಯೋಜನೆ ಜಾರಿ ಮಾಡಿದ್ವಿ. ಶಕ್ತಿ ಯೋಜನೆ ಏಪ್ರಿಲ್ ಕೊನೆಯವರೆ 21 ಕೋಟಿ 33 ಲಕ್ಷಕ್ಕೂ ಅಧಿಕ ಮಹಿಳೆಯರು ಪ್ರಯಾಣ ಮಾಡಿದ್ದಾರೆ. 4857 ಕೋಟಿ ಖರ್ಚು ಮಾಡಿದ್ದೇವೆ. ಅನ್ನಭಾಗ್ಯ ಯೋಜನೆ 4 ಕೋಟಿ 10 ಲಕ್ಷ ಫಲಾನುಭವಿಗಳಿಗೆ 5754.6 ಕೋಟಿ ಹಣ ವರ್ಗಾವಣೆ ಮಾಡಿದ್ದೇವೆ.
1.60 ಕೋಟಿ ಜನರಿಗೆ ಗೃಹಜ್ಯೋತಿ ಯೋಜನೆಯಡಿ ಫ್ರೀ ಕರೆಂಟ್ ನೀಡಿದ್ದೇವೆ. ಇದಕ್ಕೆ 3,436 ಕೋಟಿ ರೂಪಾಯಿ ಖರ್ಚು ಆಗಿದೆ. ಗೃಹಲಕ್ಷ್ಮಿ 1 ಕೋಟಿ 20 ಲಕ್ಷ ಯಜಮಾನಿಯರಿಗೆ 20 ಸಾವಿರ 293 ಕೋಟಿ 49 ಲಕ್ಷ ಖರ್ಚು ಮಾಡಿದ್ದೇವೆ. ಯುವನಿಧಿ ಯೋಜನೆಯಡಿ 1 ಲಕ್ಷದ 53 ಸಾವಿರ ಫಲಾನುಭವಿಗಳಿಗೆ DBT ಮೂಲಕ ಹಣ ವರ್ಗಾವಣೆ ಮಾಡಿದ್ದೇವೆ. ಯುವಕರಿಗೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಉದ್ಯೋಗ ತರಬೇತಿ ನೀಡಲಾಗುತ್ತಿದೆ ಎಂದರು.
ಖಜಾನೆ ಖಾಲಿ ಆಗಿ ಬಿಟ್ಟಿದೆ, ಪಾಪರ್ ಸರ್ಕಾರ ಎಂದು ಬಿಎಸ್ ಯಡಿಯೂರಪ್ಪ ಹೇಳುತ್ತಾರೆ. ಪಾಪರ್ ಆಗಿದಿದ್ದರೆ ಇಷ್ಟು ಹಣ ಖರ್ಚು ಮಾಡಲು ಆಗುತ್ತಿರಲಿಲ್ಲ. ಅವರ ಸುಳ್ಳು ಸತ್ಯಕ್ಕೆ ಹತ್ತಿರವಾಗಿರಬೇಕು ಅಲ್ವಾ ಇದು ಸುಳ್ಳಿನ ಪರಮಾವಧಿ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ 50 ಲಕ್ಷದಿಂದ 1 ಕೋಟಿಯವರಿಗೆ ಕಾಂಟ್ರ್ಯಾಕ್ಟ್ನಲ್ಲಿ ಮೀಸಲಾತಿ ಮಾಡಿದ್ದು ಯಾರು, ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗದವರ ಆ್ಯಕ್ಟ್ ಮೋದಿ ಮಾಡಿದ್ದಾರಾ?ನಾವೆಲ್ಲಿ ಅನ್ಯಾಯ ಮಾಡಿದ್ದೀವಿ, ಅಲ್ಪಸಂಖ್ಯಾತರಿಗೆ ಇದ್ದ ಮೀಸಲಾತಿ ಕಿತ್ತು ಮುಸಲ್ಮಾನರಿಗೆ ಕೊಡುತ್ತಾರೆ ಅಂತ ಮೋದಿ ಹೇಳುತ್ತಾರೆ. 1994ರಲ್ಲಿ ಶೇ 4 ರಷ್ಟು ಮೀಸಲಾತಿಯನ್ನ ಮುಸಲ್ಮಾನರಿಗೆ ಕೊಡಲಾಗಿದೆ. ಪ್ರವರ್ಗ 1 ಕ್ಕೆ ಶೇ 5 ರಷ್ಟು, ಮೀಸಲಾತಿ, ಪ್ರವರ್ಗ 2ಕ್ಕೆ ಶೇ15 ರಷ್ಟು, 2 (ಬಿ) ಗೆ ಶೇ 4 ರಷ್ಟು, 3 (ಬಿ)ಗೆ ಶೇ 4 ರಷ್ಟು, 3 (ಎ) ಮತ್ತು (ಬಿ) ಗೆ ಶೇ 4 ರಷ್ಟು ಮೀಸಲಾತಿ ಇದೆ. ಅದಕ್ಕಾಗಿಯೇ 2 ಬಿ ಮೀಸಲಾತಿ ಮುಸಲ್ಮಾನರಿಗೆ ಕೊಡಲಾಗಿದೆ. ಇದು 30 ವರ್ಷಗಳಿಂದಲೂ ಜಾರಿ ಇದೆ ಎಂದರು.
ಸಂಪುಟ ಪುನಾರಚನೆ ಇಲ್ಲ:
ಸಚಿವ ಸಂಪುಟ ಪುನಾರಚನೆ ಮಾಡುವ ಯೋಚನೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ. ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 15 ರಿಂದ 20 ಸ್ಥಾನಗಳನ್ನು ಪಡೆಯಲಿದೆ ಎಂದು ಸಿಎಂ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ಆಯೋಜಿಸಿದ್ದ ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ ನಂತರ ಯಾವುದೇ ಸಚಿವ ಸಂಪುಟ ಪುನಾರಚನೆ ಬಗ್ಗೆ ಯೋಚಿಸುತ್ತಿಲ್ಲ.
ಯಾವುದೇ ಕಾರಣಕ್ಕೂ ನಾವು ಯಾವುದೇ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಅವರು ಹೇಳಿದರು.
Advertisement