
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆಯಾಗುತ್ತಿದೆ.ಸತತ ಒಂದು ಗಂಟೆ ಮಳೆ ಮಳೆ ಸುರಿದರೆ ಬೆಂಗಳೂರಿನಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗುತ್ತವೆ. ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಹಲವು ಕಡೆ ಚರಂಡಿ ನೀರು ರಸ್ತೆ, ಮನೆಯೊಳಗೆ ನುಗ್ಗುತ್ತದೆ.
ಈ ಎಲ್ಲಾ ಸಮಸ್ಯೆಗಳ ಮಧ್ಯೆ ಬೆಂಗಳೂರಿನ ಪರಿಸ್ಥಿತಿ, ಬಿಬಿಎಂಪಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಬೆಳಗ್ಗೆ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದರು. ಹಲವು ಕಡೆಗಳಲ್ಲಿ ಚರಂಡಿಯ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮಳೆಯಾಗಲಿ. ಜಾಸ್ತಿ ಮಳೆಯಾದಷ್ಟೂ ನಮಗೆ ಒಳ್ಳೆಯದು. ಹೆಚ್ಚು ಮಳೆ ಬಂದು ತಮಿಳುನಾಡಿಗೂ ನೀರು ಹರಿಯಲಿ ಎಂದು ಹೇಳಿದ್ದಾರೆ.
ಮಳೆ ಹಾನಿ ವೀಕ್ಷಣೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲು ಇಂದು ನಾನು ಹಾಗೂ ಸಿಎಂ ಸಿದ್ದರಾಮಯ್ಯ ಸಿಟಿ ರೌಂಡ್ ಮಾಡುತ್ತಿದ್ದೇವೆ. ಕೆಲವು ಜಾಗ ಆಯ್ಕೆ ಮಾಡಿದ್ದೇವೆ. ಎಲ್ಲೆಲ್ಲಿ ರಿಪೋರ್ಟ್ ಬಂದಿದೆ ಅಲ್ಲಿಗೆ ಭೇಟಿ ನೀಡುತ್ತಿದ್ದೇವೆ. ಆಡಳಿತ ಚುರುಕು ಮಾಡಬೇಕು ಎಂದು ಈ ಕ್ರಮ ಕೈಗೊಂಡಿದ್ದೇವೆ ಎಂದರು.
ರಾತ್ರಿ ಔತಣಕೂಟ: ರಾತ್ರಿ ಔತಣಕೂಟ ಇಟ್ಟುಕೊಂಡಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಲೋಕಸಭೆ ಚುನಾವಣೆಯ ಯಾವ ರೀತಿ ಎದುರಿಸಲಾಗಿದೆ, ಮುಂದೆ ಯಾವ ರೀತಿ ಸಿದ್ಧತೆ ಬೇಕು ಎಂಬ ಕುರಿತು ಔತಣಕೂಟದಲ್ಲಿ ಚರ್ಚಿಸಲಿದ್ದೇವೆ ಎಂದು ಅವರು ಹೇಳಿದರು.
ಗೃಹ ಸಚಿವರಿಗೆ ದೂರು ನೀಡಲಿ: ಫೋನ್ ಕದ್ದಾಲಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ಗೃಹ ಸಚಿವರಿಗೆ ಲಿಖಿತ ದೂರು ನೀಡಲು ಹೇಳಿ. ಯಾರ ಯಾರ ಕಾಲದಲ್ಲಿ ಕದ್ದಾಲಿಕೆ ಆಗಿದೆ ಗೊತ್ತಿದೆ. ಆರೋಪ ಮಾಡುತ್ತಿರುವವರು ಕೆಲವರು ಹೋಂ ಮಿನಿಸ್ಟರ್ ಆಗಿದ್ದವರು, ಕೆಲವರು ಚೀಫ್ ಮಿನಿಸ್ಟರ್ ಆಗಿದ್ದವರು. ಆಗ ಎಲ್ಲ ರಿಪೋರ್ಟ್ ಬಂದಿತ್ತಲ್ಲ ಫೋನ್ ಕದ್ದಾಲಿಕೆ ಬಗ್ಗೆ ಎಂದು ಹೇಳಿದರು.
ಫೋನ್ ಕದ್ದಾಲಿಕೆ ಬಗ್ಗೆ ಕುಮಾರಸ್ವಾಮಿಗೆ ಯಾರು ಮಾಹಿತಿ ಕೊಟ್ಡಿದ್ದಾರೋ ಆ ಬಗ್ಗೆ ಅಫಿಡವಿಟ್ ಕೊಡಲು ಹೇಳಿ. ಮಾಹಿತಿ ಕೊಟ್ಟಿದ್ದರೆ ಬಹಳ ಸಂತೋಷ ಎಂದರು.
Advertisement