
ಮೈಸೂರು: ಕಳೆದ ವಾರ ಸುರಿದ ಭಾರಿ ಮಳೆಗೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಬೆಳೆ ಹಾನಿಗೊಳಗಾದ ಪ್ರದೇಶಗಳಿಗೆ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈಸೂರು, ಚಿತ್ರದುರ್ಗ, ವಿಜಯಪುರ, ತುಮಕೂರು, ಧಾರವಾಡ ಜಿಲ್ಲೆಗಳಲ್ಲಿ ತೀವ್ರ ಬೆಳೆ ಹಾನಿಯಾಗಿರುವುದನ್ನು ಗಮನಿಸಿದ ಕುಮಾರಸ್ವಾಮಿ ಅವರು ತಮ್ಮ ಭೇಟಿಯ ವೇಳೆ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಮುಂಬರುವ ಮುಂಗಾರು ಹಂಗಾಮಿಗೆ ಸರ್ಕಾರದ ಸಿದ್ಧತೆ ಪ್ರಶ್ನಿಸಿದರು.
ಮೈಸೂರು ಮತ್ತು ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳಿಗೆ ತೊಂದರೆಯಾಗಿದೆ. ಆದರೆ, ಸರಕಾರ ಕೇವಲ ಹೇಳಿಕೆಗಳಿಗಷ್ಟೇ ಸೀಮಿತವಾಗಿದ್ದು, ಮುಂಗಾರು ಮಳೆ ಎದುರಿಸಲು ಸಿದ್ಧವಾಗಿಲ್ಲ ಎಂದರು.
ಮದ್ದೂರು ಮತ್ತು ಗದಗದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ನಷ್ಟ ಅನುಭವಿಸಿದ ರೈತರಿಗೆ ಆಸರೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನಿಯಂತ್ರಣದಲ್ಲಿದೆಯೇ ಅಥವಾ ಇಲ್ಲವೇ? ಯಾವುದೇ ಸಚಿವರು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದ ಸಮಸ್ಯೆಗಳ ಬಗ್ಗೆ ಸಿಎಂ ಆಗಲಿ ಅಥವಾ ಸಚಿವ ಸಂಪುಟದಲ್ಲಿರುವವರು ಕಾಳಜಿ ವಹಿಸುವುದಿಲ್ಲ. ಬಿಜೆಪಿ ನಾಯಕರ ವಿರುದ್ಧ ದೂರು ನೀಡುವುದು ಅಥವಾ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ಸೃಷ್ಟಿಸುವುದು ಬಿಟ್ಟರೆ ಈ ಸರ್ಕಾರ ಏನನ್ನೂ ಸಾಧಿಸಿಲ್ಲ ಎಂದರು.
ಇದಕ್ಕೂ ಮುನ್ನ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್ ಅವರ ಸುತ್ತ ಇರುವವರೇ ನಿಜವಾದ ಭಯೋತ್ಪಾದಕರು. ಕಾಮೆಂಟ್ ಮಾಡುವ ಮೊದಲು ಅವರು ತಮ್ಮ ಮಾತುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
Advertisement