Bitcoin ಹಗರಣ: ಆರೋಪಿಗಳ ವಿರುದ್ಧ #KCOCAಕಾಯ್ದೆ, ಉಡುಪಿ ಗ್ಯಾಂಗ್ ವಾರ್; 6 ಮಂದಿ ಬಂಧನ, ಹುಲಿದಾಳಿ, ಮಹಿಳೆ ಸಾವು- ಈ ದಿನದ ಪ್ರಮುಖ ಸುದ್ದಿಗಳು-26-05-2024

file pic
ಸಾಂಕೇತಿಕ ಚಿತ್ರ online desk

1. ಉಡುಪಿ ಗ್ಯಾಂಗ್ ವಾರ್; 6 ಮಂದಿ ಬಂಧನ

ಉಡುಪಿ ನಗರ ಪೊಲೀಸ್‌ ವ್ಯಾಪ್ತಿಯ ಕುಂಜಿಬೆಟ್ಟುವಿನಲ್ಲಿ ನಡೆದಿದ್ದ ಗ್ಯಾಂಗ್‌ ವಾರ್‌ ಪ್ರಕರಣದ ಸಂಬಂಧ ಪೊಲೀಸರು ಭಾನುವಾರ ಮೂವರನ್ನು ಬಂಧಿಸಿದ್ದು, ಈ ವರೆಗೂ ಒಟ್ಟು 6 ಮಂದಿ ಬಂಧನಕ್ಕೊಳಗಾಗಿದ್ದಾರೆ. ರಿಯಲ್ ಎಸ್ಟೇಟ್ ವಿವಾದವೊಂದರಲ್ಲಿ ಕಾಪು ಮೂಲದ ಎರಡು ಬಣದ ಯುವಕರು ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಲ್ಲಿ ಬಂದು ಜಗಳ ಮಾಡಿಕೊಂಡು ಕಾರುಗಳನ್ನು ಗುದ್ದಿಸಿ ಹೊಡೆದಾಟ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ಆಧಾರದಲ್ಲಿ ಪೊಲೀಸರು ಮೇ 20ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಈ ವಿಡಿಯೋವನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಜೂ. 1ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಈ ಘಟನೆಯನ್ನು ಉಲ್ಲೇಖಿಸಿ ಬಿಜೆಪಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಉಗ್ರರು, ಮತಾಂಧರು, ಪುಂಡರು, ಕಿಡಿಗೇಡಿಗಳು ರೌಡಿಗಳಿಗೆ ಸಿದ್ದರಾಮಯ್ಯ ಸರ್ಕಾರ ಫ್ರೀ ಹ್ಯಾಂಡ್ ಕೊಟ್ಟು ಪೊಲೀಸರನ್ನು ಕೈಗೊಂಬೆ ಮಾಡಿಕೊಂಡಿರುವ ಪರಿಣಾಮವೇ ಇಂದು ಅರಾಜಕತೆ ಸೃಷ್ಟಿಯಾಗಿದೆ ಎಂದು ಆರೋಪಿಸಿದೆ.

2. ಹುಲಿದಾಳಿ;ಮಹಿಳೆ ಸಾವು

ಹುಲಿಯ ಹಾವಳಿ ಮತ್ತೆ ವರದಿಯಾಗಿದ್ದು, ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನಲ್ಲಿ 48 ವರ್ಷದ ಮಹಿಳೆ ಹುಲಿ ದಾಳಿಗೆ ಬಲಿಯಾಗಿದ್ದಾರೆ. ಭಾನುವಾರ ನಸುಕಿನ ಜಾವ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಮಹಿಳೆ ಎನ್ ಬೇಗೂರಿನ ಮಲದವಾಡಿ ಹಾಡಿಯವರಾಗಿದ್ದಾರೆ. ಮೇಕೆಗಳನ್ನು ಸಾಕುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿ ದೇಹವನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿತ್ತು. ಕುರಿಗಳನ್ನು ಮೇಯಿಸಲು ಹೋಗಿದ್ದ ಚಿಕ್ಕಿಯವರು ನಿನ್ನೆ ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಅರಣ್ಯ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದರು.

3. Bitcoin ಹಗರಣ: ಆರೋಪಿಗಳ ವಿರುದ್ಧ #KCOCAಕಾಯ್ದೆ

ಬಿಟ್‌ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಮತ್ತು ಆತನ ಸಹಚರ ರಾಬಿನ್ ಖಂಡೇಲ್‌ವಾಲ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಡಿ ಎಸ್ಐಟಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಎಸ್ಐಟಿ ತಂಡ 2017ರಲ್ಲಿ ತುಮಕೂರು ಸಿಇಎನ್ ಠಾಣೆಯಲ್ಲಿ ದಾಖಲಾಗಿದ್ದ ಯುನೋ ಕಾಯಿನ್ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿದೆ. ಎಸ್ಐಟಿ ತನಿಖೆಗೆ ಹಾಜರಾಗದ ಶ್ರೀಕಿಯನ್ನು ಮೇ7 ರಂದು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಆತನ ಸಹವರ್ತಿ ರಾಬಿನ್ ಖಂಡೇವಾಲಾನನ್ನು ರಾಜಸ್ಥಾನದಲ್ಲಿ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಕೋಕಾ ಕಾಯ್ದೆಯಡಿ ಬಂಧಿಸಲ್ಪಡುವ ಅಪರಾಧಿಗೆ ಕನಿಷ್ಠ ಒಂದು ವರ್ಷ ಜಾಮೀನು ಸಿಗುವುದಿಲ್ಲ.

4. ಹಾಸನದಲ್ಲಿ ರಸ್ತೆ ಅಪಘಾತ-6 ಮಂದಿ ಸಾವು

ನಿದ್ದೆ ಮಂಪರಿನಲ್ಲಿ ಚಾಲಕ ಕಾರು ಚಲಾಯಿಸಿ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ನಸುಕಿನ ಜಾವ ಹಾಸನ ಹೊರವಲಯದ ಈಚನಹಳ್ಳಿ ಬಳಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜು ಆಗಿದೆ. ಚಿಕ್ಕಬಳ್ಳಾಪುರ ಮೂಲದ ಆರು ಮಂದಿ, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ಭೇಟಿಯಾಗಿ, ವಾಪಸ್ ಊರಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದ್ದು, ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5. ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡಿದರೆ, ಪೋಷಕರ ವಿರುದ್ಧ ಕೇಸ್: ಪೊಲೀಸ್ ಆಯುಕ್ತ

ಅಪ್ರಾಪ್ತ ಮಕ್ಕಳುವಾಹನ ಚಲಾಯಿಸುವುದು ಅಪರಾಧವಾಗಿದ್ದು, ಈ ರೀತಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತರಾದ ಬಿ.ದಯಾನಂದ ಎಚ್ಚರಿಕೆ ನೀಡಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿಯ ಐಐಐಟಿ ಕಾಲೇಜು ಆಡಿಟೋರಿಯಂನಲ್ಲಿ ಹಮಿಕೊಂಡಿದ್ದ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, 18 ವರ್ಷಕ್ಕಿಂತ ಕೆಳಗಿನ ಬಾಲಕ, ಬಾಲಕಿಯರು ಎಷ್ಟೇ ಸ್ಮಾರ್ಟ್‌ ಇದ್ದರೂ, ಪ್ರಬುದ್ಧರಾಗಿರುವುದಿಲ್ಲ ನಮ್ಮ ಮಕ್ಕಳು ಹೆಚ್ಚು ಬುದ್ಧಿವಂತರು, 10 ವರ್ಷಕ್ಕೇ ದ್ವಿಚಕ್ರ ವಾಹನ, 15 ವರ್ಷಕ್ಕೆ ಕಾರು ಚಲಾಯಿಸುತ್ತಾರೆ ಎಂದು ಪೋಷಕರು ತಮ ಮಕ್ಕಳಿಗೆ ವಾಹನದ ಕೀ ಕೊಟ್ಟರೆ ಅವರ ಕೈಗೆ ಆಯುಧ ಕೊಟ್ಟಂತಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ ಜ್ಯುವಿನೈಲ್‌ ಜಸ್ಟೀಸ್‌‍ ಆ್ಯಕ್ಟ್‌ನಲ್ಲಿ ಜಾಮೀನುರಹಿತ ಪ್ರಕರಣ ದಾಖಲಿಸಲಾಗುವುದು. ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು. ಪುಣೆಯಲ್ಲಿ ನಡೆದ ಅಪಘಾತ ಪ್ರಕರಣವೊಂದರಲ್ಲಿ ಐಷಾರಾಮಿ ಕಾರೊಂದನ್ನು ಉದ್ಯಮಿಯೊಬ್ಬರು ತಮ್ಮ ಅಪ್ರಾಪ್ತ ಮಗನಿಗೆ ಕೊಟ್ಟು ಇಬ್ಬರ ಸಾವಿಗೆ ಕಾರಣವಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com