
ಮೈಸೂರು: ನಾಡೊಳಗೆ ನುಗ್ಗಿ ಹುಲಿಯ ಹಾವಳಿ ಮತ್ತೆ ಹೆಚ್ಚಾಗಿದೆ. ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನಲ್ಲಿ 48 ವರ್ಷದ ಮಹಿಳೆಯನ್ನು ಹುಲಿ ಕೊಂದು ಹಾಕಿದೆ. ಇಂದು ಭಾನುವಾರ ನಸುಕಿನ ಜಾವ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದೆ.
ಹೆಚ್ ಡಿ ಕೋಟೆ ತಾಲೂಕಿನ ಮೂರ್ಬಂದ ಬೆಟ್ಟದಲ್ಲಿ ನಿನ್ನೆ ಶನಿವಾರ ರಾತ್ರಿ ಚಿಕ್ಕಿ ಎಂಬ ಮಹಿಳೆ ಹುಲಿ ದಾಳಿಗೆ ಬಲಿಯಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಎನ್ ಬೇಗೂರಿನ ಮಲದವಾಡಿ ಹಾಡಿಯವರು.
ಮೇಕೆಗಳನ್ನು ಸಾಕುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿ ದೇಹವನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿತ್ತು. ಕುರಿಗಳನ್ನು ಮೇಯಿಸಲು ಹೋಗಿದ್ದ ಚಿಕ್ಕಿಯವರು ನಿನ್ನೆ ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಅರಣ್ಯ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದಾರೆ.
ಇಂದು ಬೆಳಗ್ಗೆ ಅರಣ್ಯ ಕಾವಲು ಗೋಪುರದ ಬಳಿ ಶವ ಪತ್ತೆಯಾಗಿದೆ. ಅಂತರಸಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳದ ಸಮೀಪದಲ್ಲಿ ಹುಲಿಯ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಿದ್ದಾರೆ.
Advertisement