MLC ಚುನಾವಣೆ ಸಿಎಂ-ಡಿಸಿಎಂ ಏಕಪಕ್ಷೀಯ ನಿರ್ಧಾರ ಸೂಕ್ತವಲ್ಲ-ಪರಮೇಶ್ವರ್ ಎಚ್ಚರಿಕೆ: Prajwal ಪ್ರಕರಣ: ಇಬ್ಬರ ಬಂಧನ; ಮಳೆ ನೀರು ಚರಂಡಿಗೆ ಹರಿಸಿದರೆ ಬೀಳತ್ತೆ ದಂಡ!: ಈ ದಿನದ ಪ್ರಮುಖ ಸುದ್ದಿಗಳು-28-05-2024

File pic
(ಸಾಂಕೇತಿಕ ಚಿತ್ರ)online desk

1. MLC ಚುನಾವಣೆ ಸಿಎಂ-ಡಿಸಿಎಂ ಏಕಪಕ್ಷೀಯ ನಿರ್ಧಾರ ಸೂಕ್ತವಲ್ಲ-ಪರಮೇಶ್ವರ್ ಎಚ್ಚರಿಕೆ

ವಿಧಾನಪರಿಷತ್ ನ 11 ಸ್ಥಾನಗಳಿಗೆ ಜೂ.13 ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವ ಸಂಬಂಧ ಹೈಕಮಾಂಡ್ ಜೊತೆ ಚರ್ಚಿಸಲು ಇಂದು ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ವಿಧಾನಸಭೆಯಲ್ಲಿನ ಪಕ್ಷಗಳ ಶಾಸಕರ ಸಂಖ್ಯಾ ಬಲದ ಪ್ರಕಾರ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 7 ಸ್ಥಾನಗಳಲ್ಲಿ, ಬಿಜೆಪಿ 3 ಸ್ಥಾನಗಳಲ್ಲಿ ಹಾಗೂ ಜೆಡಿಎಸ್ ಒಂದು ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಈ ಮಧ್ಯೆ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಷಯವಾಗಿ ಸಿಎಂ-ಡಿಸಿಎಂ ಇಬ್ಬರೇ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ. ಕಾಂಗ್ರೆಸ್ ನ ಹಿರಿಯ ನಾಯಕರ ಸಲಹೆ ಪಡೆಯಬೇಕೆಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಪರಮೇಶ್ವರ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, , ಖಂಡಿತವಾಗಿಯೂ ಪಕ್ಷದ ಹಿರಿಯ ನಾಯಕರ ಸಲಹೆ ಪಡೆಯುತ್ತೇವೆ. ''300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಎಲ್ಲ ವರ್ಗದವರೂ ಇದ್ದಾರೆ, ಏಳು ಸ್ಥಾನಕ್ಕೆ ಎಲ್ಲ ವರ್ಗದವರಿಗೂ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ, ಕೆಲವರು ಬ್ಲಾಕ್ ಮಟ್ಟದಲ್ಲಿ, ಕೆಲವರು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹುದ್ದೆಗಳನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ.

2. ನಗರದಲ್ಲಿ ರಸ್ತೆ ಅಪಘಾತ; ಬಾಲಕಿ ಸಾವು

ವೇಗವಾಗಿ ಬಂದ ಕಾರೊಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಮಕ್ಕಳಿಗೆ ಡಿಕ್ಕಿ ಹೊಡೆದು, ನಾಲ್ಕು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಬೆಂಗಳೂರು-ಮಾಗಡಿ ರಸ್ತೆಯ ತಾವರೆಕೆರೆ ಪ್ರದೇಶದಲ್ಲಿ ನಡೆದಿದೆ. ಬಾಲಕಿ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ರಾತ್ರಿ 7.15 ರ ಸುಮಾರಿಗೆ ಸಾವನ್ನಪ್ಪಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕ ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

3. ಮಳೆ ನೀರು ಚರಂಡಿಗೆ ಹರಿಸಿದರೆ ಬೀಳತ್ತೆ ದಂಡ

ಮಳೆ ನೀರು ಕೋಯ್ಲು ಪದ್ದತಿಯ ಅಳವಡಿಕೆಯ ಮೂಲಕ ಆ ನೀರಿನ ಸದ್ಬಳಕೆ ಮಾಡುವುದು ಕಡ್ಡಾಯವಾಗಿದೆ. ಆದರೆ, ಹಲವಾರು ಕಡೆಗಳಲ್ಲಿ ಈ ನೀರನ್ನು ನೇರವಾಗಿ ಒಳಚರಂಡಿಗೆ ಸೇರ್ಪಡೆ ಮಾಡುವ ಮೂಲಕ ಒಳಚರಂಡಿ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಲಾಗುತ್ತಿದೆ. ಮಳೆ ನೀರನ್ನು ನೇರವಾಗಿ ಒಳಚರಂಡಿಗೆ ಹರಿಯಬಿಡುತ್ತಿರುವ ಜನರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಬೆಂಗಳೂರು ಜಲಮಂಡಳಿ ಸೂಚನೆ ನೀಡಿದೆ.

ಮಳೆ ನೀರು ಒಳಚರಂಡಿಗೆ ಸೇರ್ಪಡೆಗೊಂಡು ಪೋಲಾಗುವುದಲ್ಲದೇ, ಒಳಚರಂಡಿ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ. ಇದನ್ನ ತಡೆಗಟ್ಟುವುದು ಹಾಗೂ ಜನರು ಮಳೆ ನೀರನ್ನು ಸಮರ್ಪಕವಾಗಿ ಹಿಡಿದು ಅದನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ದೇಶನ ನೀಡಿದ್ದರು.

4. KMVSTDCL ಅಧಿಕಾರಿ ಆತ್ಮಹತ್ಯೆ: ಮೂವರು ಉನ್ನತ ಅಧಿಕಾರಿಗಳ ವಿರುದ್ಧ FIR

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ಸಂಬಂಧ ಸಂಸ್ಥೆಯ ಮೂವರು ಉನ್ನತ ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ. ಅಕೌಂಟ್ಸ್ ಅಧಿಕಾರಿ ಚಂದ್ರಶೇಖರನ್ ಪಿ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದು, ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ ನಾಗೇಂದ್ರ ವಿರುದ್ಧವೂ ಆರೋಪ ಕೇಳಿಬಂದಿದ್ದು, ತಮ್ಮ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಹಗರಣದಲ್ಲಿ ನನ್ನ ಪಾತ್ರವಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

5. ಬಿತ್ತನೆ ಬೀಜದ ಬೆಲೆ ಏರಿಕೆ

ಬಿತ್ತನೆ ಬೀಜದ ಬೆಲೆ ಏರಿಕೆ ಖಂಡಿಸಿ ಕೃಷಿ ಸಚಿವ ಮತ್ತು ಸರ್ಕಾರದ ವಿರುದ್ಧ ವಿಪಕ್ಷಗಳಾದ ಜೆಡಿಎಸ್-ಬಿಜೆಪಿ ಆಕ್ರೋಶ ವ್ಯಕ್ತಪಡಿಸಿವೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕೃಷಿ ಸಚಿವರೇ ಎಲ್ಲಿದಿರಪ್ಪಾ ಎಂದು ಪ್ರಶ್ನಿಸಿದೆ. ಬಿತ್ತನೆ ಬೀಜದ ದರ ಶೇ.60ರಷ್ಟು ಹೆಚ್ಚಳವಾಗಿದೆ. ಪಂಚ ಗ್ಯಾರಂಟಿ ಕೊಟ್ಟು ಜನರನ್ನು ಉದ್ಧಾರ ಮಾಡಿದ್ದೀವಿ ಎಂದು ಬೀಗುವ ಕಾಂಗ್ರೆಸ್ ಸರಕಾರ ಮಾಡಿರುವ ಘನಕಾರ್ಯ ಇದು. ಒಂದು ಕೈಯ್ಯಲ್ಲಿ ಗ್ಯಾರಂಟಿ, ಇನ್ನೊಂದು ಕೈಯ್ಯಲ್ಲಿ ಸುಲಿಗೆ ಮಾಡುತ್ತಿರುವ ಘನಕಾರ್ಯವಿದು. ಕೊಟ್ಟ ಹಾಗೆ ಕೊಟ್ಟು ಜನರಿಗೆ ಗೊತ್ತೇ ಆಗದಂತೆ ಜೇಬಿಗೆ ಕೈ ಹಾಕಿ ಪಿಕ್ ಪಾಕೆಟ್ ಮಾಡುತ್ತಿರುವ ಕಿಡಿಗೇಡಿ ಕೆಲಸ ಇದು ಎಂದು ಜೆಡಿಎಸ್ ಆರೋಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com