ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇತ್ತೀಚೆಗೆ ತಾವಿರುವ ಸ್ಥಳದಿಂದಲೇ ವಿಡಿಯೋ ಪ್ರಕಟಿಸಿದ್ದ ಪ್ರಜ್ವಲ್ ರೇವಣ್ಣ ಮೇ 31 ರಂದು SIT ತನಿಖೆಗೆ ಹಾಜರಾಗುವುದಾಗಿ ಹೇಳಿದ್ದರು. ಇದೇ ಪ್ರಕರಣದಲ್ಲಿ ಎಸ್ಐಟಿ ಮತ್ತು ಎಫ್ಎಸ್ಎಲ್ ಅಧಿಕಾರಿಗಳು ಹಾಸನದ ಆರ್.ಸಿ.ರಸ್ತೆಯಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಮನೆ ಪರಿಶೀಲಿಸಿ ವಿವಿಧ ಕಡೆ ಬೆರಳಚ್ಚು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಪ್ರಜ್ವಲ್ ರೇವಣ್ಣ ಮಲಗುವ ಕೊಠಡಿಯಲ್ಲಿನ ಹಾಸಿಗೆ, ದಿಂಬು, ಹೊದಿಕೆ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿನ ಸಂತ್ರಸ್ತ ಮಹಿಳೆಯ ಅಪಹರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಭವಾನಿ ರೇವಣ್ಣ ಅರ್ಜಿಯ ಆದೇಶವನ್ನು ಕೋರ್ಟ್ ಕಾಯ್ದಿರಿಸಿದ್ದು ತೀರ್ಪನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಮೆ 31 ಕ್ಕೆ ಮುಂದೂಡಿದೆ. ಈ ಮಧ್ಯೆ ಹಾಸನ ಪೆನ್ ಡ್ರೈವ್ ವೈರಲ್ ಪ್ರಕರಣದ ಆರೋಪಿಗಳಾದ ನವೀನ್ ಹಾಗೂ ಚೇತನ್ ರನ್ನು ಜೂನ್ 1 ರವರೆಗೆ ಎಸ್ಐಟಿ ಕಸ್ಟಡಿಗೆ ನೀಡಲಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಶೌಚಾಲಯದ ಕನ್ನಡಿ ಮೇಲೆ ಬಾಂಬ್ ಇರಿಸಿರುವ ಸಂದೇಶವಿದ್ದ ಬರಹ ಕೆಲ ಕಾಲ ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿತ್ತು. ಬೆಳಗಿನ ಜಾವ ಈ ಸಂದೇಶ ಬರೆಯಲಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ವಿಮಾನ ನಿಲ್ದಾಣದ ಎರಡೂ ಟರ್ಮಿನಲ್‌ಗಳ ತೀವ್ರ ತಪಾಸಣೆ ನಡೆಸಿದರು. ತಪಾಸಣೆ ಪೂರ್ಣಗೊಂಡ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂದು ಘೋಷಿಸಲಾಯಿತು.
ಹಿಂದೂ ಯುವಕನ ಮೇಲೆ ಹಲ್ಲೆ ನಡದ ಪ್ರಕರಣದಲ್ಲಿ ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ್ದ ಪಿಎಸ್‌ಐನ್ನು ಅಮಾನತು ಮಾಡಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಬೆಳ್ಳೂರು ಪಟ್ಟಣದಲ್ಲಿ ವರದಿಯಾಗಿದೆ. ಬೆಳ್ಳೂರಿನಲ್ಲಿ ಕಾರು ಓವರ್ ಟೇಕ್ ವಿಚಾರವಾಗಿ ಯುವಕರ ಮಧ್ಯೆ ಗಲಾಟೆಯಾಗಿದ್ದು, ಬಳಿಕ ಅಭಿಲಾಷ್ ಎಂಬವನ ಮೇಲೆ ಹಲ್ಲೆ ನಡೆದಿತ್ತು. ಘಟನೆ ಸಂಬಂಧ 3 ಪ್ರತ್ಯೇಕ ದೂರು ದಾಖಲಾಗಿದೆ. ಹಲ್ಲೆಗೊಳಗಾದ ಅಭಿಲಾಷ್ ತಂದೆ ರಾಮು, ಅಭಿಲಾಷ್ ಅತ್ತೆ ರಶ್ಮಿ ಹಾಗೂ ಮಂಜುಳಾ ಎಂಬುವವರು ಹಿಂದೂ ಸಂಘಟನೆ ಮುಖಂಡರೊಂದಿಗೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಅಭಿಲಾಷ್ ಮೇಲೆ ಹಲ್ಲೆ, ರಶ್ಮಿ ಮನೆಗೆ ನುಗ್ಗಿ ದಾಂಧಲೆ ಹಾಗೂ ಮಂಜುಳಾಗೆ ರಸ್ತೆಯಲ್ಲಿ ಬೆದರಿಕೆ ಹಾಕಿದ ಬಗ್ಗೆಯೂ ಪ್ರತ್ಯೇಕ ದೂರು ನೀಡಿದ್ದು, ಮೊಹ್ಮದ್ ಹುಜೈಫ್, ಇಮ್ರಾನ್, ಸಮೀರ್ ಸೂಫಿಯಾನ್ ಮತ್ತು ಇರ್ಫಾನ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ.
ಕಾವೇರಿಗೆ ಕಲುಷಿತ ಮಿಶ್ರಿತ ನೀರು ಪೂರೈಕೆಯಾಗುತ್ತಿರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು, ಅನಾಹುತ ತಡೆಯಲು ತಾಂತ್ರಿಕ ಪರಿಣಿತರ ತನಿಖಾ ತಂಡ ರಚನೆಗೆ ಮನವಿ ಮಾಡಿ ಶಾಸಕ ದಿನೇಶ್ ಗೂಳಿಗೌಡ ಸಿಎಂ, ಡಿಸಿಎಂ, ಕೈಗಾರಿಕಾ ಸಚಿವರಿಗೆ ಪತ್ರ ಬರೆದಿದ್ದಾರೆ. ಕಾವೇರಿ ಹರಿಯುವ ಮಾರ್ಗದ ಪ್ರಮುಖ ನಗರ-ಪಟ್ಟಣಗಳ ಭಾಗದಲ್ಲಿ ಹಲವು ಕಾರ್ಖಾನೆಗಳು ತಲೆ ಎತ್ತಿದ್ದು ಅದರ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೆ ನೇರವಾಗಿ ನದಿಗೆ ಹರಿಯ ಬೀಡುತ್ತಿರುವುದರಿಂದ ನದಿಯ ನೀರು ಕಲುಷಿತಗೊಂಡು ಮಲಿನಗೊಳ್ಳುತ್ತಿದೆ ಎಂಬ ಅಂಶವನ್ನು ಉಲ್ಲೇಖಿಸಿರುವ ಶಾಸಕರು ತ್ಯಾಜ್ಯ ಮಿಶ್ರಿತ ನೀರಿನಿಂದ ಕಾವೇರಿ ನದಿ ನೀರು ಕಲುಷಿತ ಆಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ INDIA ಕೂಟ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರ ಖಾತೆಗೆ 1 ಲಕ್ಷ ರೂ ಜಮೆ ಮಾಡಲಾಗುತ್ತದೆ ಎಂಬ ರಾಹುಲ್ ಗಾಂಧಿ ಹೇಳಿಕೆ ಬೆನ್ನಲ್ಲೆ ನಗರದ ವಿವಿಧ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವುದಕ್ಕಾಗಿ ಜನರು ಸಾಲುಗಟ್ಟಿ ನಿಲ್ಲಲಾರಂಭಿಸಿದ್ದಾರೆ. ಹೆಚ್ಚಾಗಿ ಮುಸ್ಲಿಂ ಮಹಿಳೆಯರೇ ಕಂಡು ಬರುತ್ತಿದ್ದು, ಕಳೆದ 15 ದಿನದಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಖಾತೆ ತೆರೆಯಲು ಮಹಿಳೆಯರು ಮುಗಿಬೀಳುತ್ತಿದ್ದಾರೆ. ಮಹಿಳೆಯರ ನಿಯಂತ್ರಣ ಮಾಡಲಾರದೆ ಬೆಂಗಳೂರಿನ ಅಂಚೆ ಕೇಂದ್ರ ಕಚೇರಿಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಅಂಚೆ ಕಚೇರಿ ಆವರಣ ಅಕ್ಷರಶಃ ಸಂತೆಯಂತಾಗಿದೆ.
Advertisement