
ಬೀದರ್: ಬೀದರ್ ನಗರದ ಹೊರವಲಯದ ಮೈಲೂರಿನಲ್ಲಿರುವ ಗುರುನಾನಕ್ ದೇವ್ ಪದವಿ ಕಾಲೇಜಿನಲ್ಲಿ ಬುಧವಾರ ಎರಡು ಸಮುದಾಯದ ವಿದ್ಯಾರ್ಥಿಗಳ ನಡುವೆ ಜಗಳವಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಗುರುನಾನಕ್ ದೇವ್ ಪದವಿ ಕಾಲೇಜಿನಲ್ಲಿ ಮೇ 31ರಂದು ಯುವಜನೋತ್ಸವ ಆಯೋಜಿಸಲು ಉದ್ದೇಶಿಸಿದ್ದು, ಅದರ ಸಿದ್ಧತೆಗಾಗಿ ವಿದ್ಯಾರ್ಥಿಗಳು ಇಂದು ‘ತಾಲಿಮು’ ಏರ್ಪಡಿಸಿದ್ದರು ಎಂದು ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ನಾಟಕ ತಾಲಿಮು ನಡೆಸುತ್ತಿದ್ದಾಗ ಇಬ್ಬರು ವಿದ್ಯಾರ್ಥಿಗಳು ನಾಟಕದ ಭಾಗವಾಗಿದ್ದ ‘ಜೈ ಶ್ರೀರಾಮ್’ ಘೋಷಣೆ ಕೂಗಿದರು. ಇದಕ್ಕೆ ಇನ್ನೊಂದು ಸಮುದಾಯದ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಆ ಸಮುದಾಯದ ಇಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಸಮುದಾಯದ ವಿದ್ಯಾರ್ಥಿಗಳ ನಡುವೆ ಕ್ಯಾಂಪಸ್‌ನಲ್ಲಿ ದೊಡ್ಡ ಜಗಳವೇ ನಡೆದಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಜಗಳವಾಡುತ್ತಿದ್ದ ಗುಂಪನ್ನು ಶಮನಗೊಳಿಸಿದರು. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ನಿಷೇಧಾಜ್ಞೆ ಹೇರುವ ಅಗತ್ಯವಿಲ್ಲ. ಕಾಲೇಜು ಮತ್ತು ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಬೀದರ್ ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ತಿಳಿಸಿದ್ದಾರೆ.
ಮೇ 31 ರಂದು ನಡೆಯಲಿರುವ ಯೂತ್ ಫೆಸ್ಟ್ ಅನ್ನು ಕಾಲೇಜು ಆಡಳಿತ ಮಂಡಳಿ ರದ್ದುಗೊಳಿಸಿದೆ ಎಂದು ಅವರು ಹೇಳಿದ್ದಾರೆ.
ಜೈ ಶ್ರೀ ರಾಮ್ ಘೋಷಣೆ ಕೂಗಿದ ವಿದ್ಯಾರ್ಥಿಗಳು ನೋವಿನ ಬಗ್ಗೆ ದೂರು ನೀಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಮತ್ತು ಎಂಎಲ್‌ಸಿ (ಮೆಡಿಕೊ ಲೀಗಲ್ ಕೇಸ್) ದಾಖಲಿಸಿದ ನಂತರ ಅವರನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
Advertisement