
ನವದೆಹಲಿ: ಮಹಿಳೆಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಅಮಾನತುಗೊಂಡಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಲು ವಿದೇಶಾಂಗ ಸಚಿವಾಲಯ ನೀಡಿರುವ ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ಜೂನ್ 2 ರವರೆಗೆ ಸಮಯಾವಕಾಶವಿದೆ.
ಪ್ರಜ್ವಲ್ ರೇವಣ್ಣ ಇಂದು ಬೆಂಗಳೂರಿಗೆ ಮರಳುತ್ತಿರುವಂತೆಯೇ ವಿದೇಶಾಂಗ ಸಚಿವಾಲಯ ಈ ವಿಷಯ ತಿಳಿಸಿದೆ. ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮನವಿಯಂತೆ ರಾಜತಾಂತ್ರಿಕ ಪಾಸ್‌ಪೋರ್ಟ್ ನ್ನು ಏಕೆ ರದ್ದುಗೊಳಿಸಬಾರದು ಎಂದು ಕೇಳಿ ಮೇ 23 ರಂದು ಪ್ರಜ್ವಲ್ ರೇವಣ್ಣ ಅವರಿಗೆ MEA ನೋಟಿಸ್ ನೀಡಿದೆ.
ಮೇ 21 ರಂದು ಕರ್ನಾಟಕ ಸರ್ಕಾರದಿಂದ ಮನವಿ ಸ್ವೀಕರಿಸಲಾಗಿದ್ದು, ಭಾರತೀಯ ಪಾಸ್ ಪೋರ್ಟ್ ಕಾಯ್ದೆ ಪ್ರಕಾರ, ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವ ಕ್ರಮವನ್ನು ಪ್ರಾರಂಭಿಸಿದ್ದೇವೆ. ಮೇ 23 ರಂದೇ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದು, 10 ದಿನಗಳೊಳಗೆ ಅವರು ಪ್ರತಿಕ್ರಿಯೆ ನೀಡಬೇಕು. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಗಡುವು ಮುಗಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಕರ್ನಾಟಕ ಸರ್ಕಾರದಿಂದ ಪತ್ರ ಬಂದ ನಂತರ ಪ್ರಜ್ವಲ್ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಯನ್ನು ವಿದೇಶಾಂಗ ಸಚಿವಾಲಯ ಪ್ರಾರಂಭಿಸಿದೆ.
Advertisement