
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಹಾಗೂ ಅಧಿಕಾರಿಯೊಬ್ಬರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಆರೋಪ ಕೇಳಿಬಂದಿರುವ ಪರಿಶಿಷ್ಟ ಪಂಗಡ ಸಚಿವ ಬಿ ನಾಗೇಂದ್ರ ಅವರಿಂದ ವಿವರಣೆ ಕೇಳಿ ಸಮನ್ಸ್ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಗುರುವಾರ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಅಧಿಕಾರಿಗಳಿಗೆ ವಿವರವಾದ ವರದಿ ಕೇಳಿದ್ದಾರೆ ಎಂದರು.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಪಿ ಭಾನುವಾರ ಸಂಜೆ ತಮ್ಮ ನಿವಾಸದ ಆತ್ಮಹತ್ಯೆ ಮಾಡಿಕೊಂಡ ನಂತರ ನಿಗಮದಿಂದ ಅಕ್ರಮವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು 88. 62 ಕೋಟಿ ರೂ. ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಡೆತ್ ನೋಟ್ ನಲ್ಲಿ ನಿಗಮದ ಎಂಡಿ ಜೆ. ಜಿ. ಪದ್ಮನಾಭ್, ಅಕೌಂಟ್ಸ್ ಅಧಿಕಾರಿ ಪರಶುರಾಮ್ ಜಿ ದುರ್ಗಣ್ಣನವರ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಮ್ಯಾನೇಜರ್ ಸುಚಿಸ್ಮಿತಾ ರವಾಲಾ ಅವರ ಹೆಸರನ್ನು ಉಲ್ಲೇಖಿಸಿದ್ದರು. ಅಲ್ಲದೇ, ಹಣ ವರ್ಗಾವಣೆಗೆ ಸಚಿವರು ಮೌಖಿಕವಾಗಿ ಸೂಚಿಸಿದ್ದರು ಎಂದು ಚಂದ್ರಶೇಖರನ್ ಹೇಳಿದ್ದರು.
ಈ ಸಂಬಂಧ ಪ್ರತಿಪಕ್ಷ ಬಿಜೆಪಿ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದು, ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದೆ. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ರಾಜೀನಾಮೆ ಕೇಳುವುದು ಪ್ರತಿಪಕ್ಷಗಳ ಕರ್ತವ್ಯ. ಅದನ್ನು ಅವರು ಬಯಸುತ್ತವೆ. ನಾವು ಖಂಡಿತವಾಗಿ ಪರಿಶೀಲಿಸುತ್ತೇವೆ. ಎಫ್ ಐಆರ್ ನೋಡಿದ್ದೇನೆ. ಸಿಎಂ ಕೂಡಾ ಗಂಭೀರವಾಗಿ ಪರಿಗಣಿಸಿದ್ದಾರೆ. ನಾಗೇಂದ್ರ ಅವರೊಂದಿಗೆ ಮಾತನಾಡುತ್ತೇವೆ. ಯಾವುದು ಸತ್ಯ, ಸುಳ್ಳು ಎಂಬುದನ್ನು ತಿಳಿದುಕೊಳ್ಳುತ್ತೇವೆ. ಯಾವುದೇ ಸಾಕ್ಷ್ಯಧಾರ ಇಲ್ಲದೆ ಯಾರೊ ಆರೋಪ ಮಾಡಿದರೆ, ಅದಕ್ಕೆ ನಾವು ಪ್ರತಿಕ್ರಿಯಿಸಲು ಆಗದು ಎಂದರು.
ಯಾರಾದರೂ ತಪ್ಪು ಮಾಡಿದ್ದರೆ, ಕ್ರಮ ಕೈಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಅಧಿಕಾರಿಗಳಿಂದ ವಿಸ್ತೃತ ವಿವರ ಕೇಳಿದ್ದೇವೆ. ಕೆಲ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಸಿಎಂ ಕೂಡಾ ಗಂಭೀರವಾಗಿ ಪರಿಗಣಿಸಿದ್ದು, ಬ್ಯಾಂಕ್ ಅಥವಾ ಅಧಿಕಾರಿ ಯಾವುದೇ ಯಾರೇ ತಪ್ಪುವೆಸಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪ್ರಕರಣ ಕುರಿತು ಪರಿಶೀಲಿಸುತ್ತೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಇದು ಕೋಟ್ಯಂತರ ರೂಪಾಯಿ ವಿಚಾರ. ಎಫ್ ಐಆರ್ ನೋಡುತ್ತೇನೆ. ಕೆಲವೊಂದು ಮಾಹಿತಿ ಪಡೆಯುತ್ತೇವೆ. ಸಚಿವರಿಗೂ ಸಮನ್ಸ್ ನೀಡುತ್ತೇವೆ. ನಾವು ನ್ಯಾಯಯುತವಾಗಿ ವಿಚಾರಣೆ ಮಾಡಬೇಕು, ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
Advertisement