
ಬೆಂಗಳೂರು: ಅಮಾನತುಗೊಂಡಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಕೇಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಮಹಿಳಾ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ಪೊಲೀಸರು ಅವರನ್ನು ಬಂಧಿಸಿ ಜೀಪಿನಲ್ಲಿ ಕೂರಿಸಿಕೊಂಡು ಎಸ್ ಐಟಿ ಕಚೇರಿಗೆ ಕರೆದೊಯ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಜಾರಿಗೊಳಿಸಲಾಗಿದ್ದ ಬಂಧನ ವಾರಂಟ್ ಪ್ರತಿ ಹಿಡಿದುಕೊಂಡು ಪ್ರಜ್ವಲ್ ಬಂಧನಕ್ಕೆ ಮಹಿಳಾ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದರು.
ಬಂಧಿಸಿ ಕರೆತಂದಿದ್ದು ಮಹಿಳಾ ಅಧಿಕಾರಿಗಳು: ಪ್ರಜ್ವಲ್‌ನಿಂದ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ವೀಡಿಯೊಗಳು ಸೋರಿಕೆಯಾದ ನಂತರ ಅವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಹಾಸನದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸುತ್ತಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ 33 ವರ್ಷದ ಮೊಮ್ಮಗ ಪ್ರಜ್ವಲ್ ಕಳೆದ ಏಪ್ರಿಲ್ 27 ರಂದು ವಿದೇಶಕ್ಕೆ ಹೋದವರು ಇಂದು ಬೆಳಗ್ಗೆಯಷ್ಟೇ ವಾಪಸ್ಸಾಗಿದ್ದಾರೆ.
ಅವರು ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ವಿಮಾನದಿಂದ ಇಳಿದ ಕೂಡಲೇ ಖಾಕಿ ಧರಿಸಿದ ಮಹಿಳೆಯರು ಅವರನ್ನು ಬರಮಾಡಿಕೊಂಡರು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಬಂಧನ ವಾರಂಟ್ ನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯಲ್ಲಿ, ಇಬ್ಬರು ಐಪಿಎಸ್ ಅಧಿಕಾರಿಗಳಾದ ಸುಮನ್ ಡಿ ಪೆನ್ನೇಕರ್ ಮತ್ತು ಸೀಮಾ ಲಾಟ್ಕರ್ ನೇತೃತ್ವದ ಮಹಿಳಾ ಪೊಲೀಸರು ಅವರನ್ನು ಸುತ್ತುವರೆದಿದ್ದರು.
ಪ್ರಜ್ವಲ್ ತಮ್ಮ ಅಧಿಕಾರ ಮತ್ತು ಸ್ಥಾನಮಾನ ದುರ್ಬಳಕೆ ಮಾಡಿಕೊಂಡು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡರು ಎಂಬ ಆರೋಪವಿದೆ. ಸಂತ್ರಸ್ತ ಮಹಿಳೆಯರು ಯಾರಿಗೂ ಹೆದರಬೇಕಾಗಿಲ್ಲ, ಧೈರ್ಯಮಾಡಿ ಮುಂದೆ ಬಂದು ದೂರು ನೀಡಬಹುದು ಎಂದು ಸಂದೇಶ ರವಾನಿಸಲು ಮಹಿಳಾ ಅಧಿಕಾರಿಗಳನ್ನೇ ಕರೆತರಲು ಕಳುಹಿಸಲಾಗಿತ್ತು ಎಂದು ಮೂಲಗಳು ಹೇಳುತ್ತವೆ.
ಎಲ್ಲಾ ಕಾನೂನು ಪ್ರಕ್ರಿಯೆಗಳ ಮೂಲಕ ಅವರನ್ನು ಬಂಧಿಸಲು ಅದೇ ಮಹಿಳೆಯರಿಗೆ ಅಧಿಕಾರವಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಮಹಿಳಾ ಅಧಿಕಾರಿಗಳು ಯಾರಿಗೂ ಹೆದರುವುದಿಲ್ಲ ಎಂಬ ಸಾಂಕೇತಿಕ ಸಂದೇಶವನ್ನು ಸಂತ್ರಸ್ತೆಯರಿಗೆ ರವಾನಿಸುವುದು ಕೂಡ ಇದರ ಹಿಂದಿನ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.
Advertisement