ಬೆಂಗಳೂರು: ಸುವರ್ಣ ಮಹೋತ್ಸವ ಪ್ರಶಸ್ತಿ ವಿಷಯದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯಿಂದ ಸಮಾಜ ಸೇವಕರೊಬ್ಬರಿಗೆ ಅವಮಾನವಾಗಿದೆ.
ತಾವು ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ಮಂಗಳೂರಿನ ಸಮಾಜ ಸೇವಕ ಸೇವಕ ಬಾಬು ಪಿಲಾರ್ ಅವರಿಗೆ ಕರೆ ಮಾಡಿ, ಬೆಂಗಳೂರಿಗೆ ಬರುವಂತೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಆದರೆ ಪ್ರಶಸ್ತಿ ಸ್ವೀಕರಿಸಲು ಹೋಗಬೇಕು ಎನ್ನುವಷ್ಟರಲ್ಲಿ ಪ್ರಶಸ್ತಿ ಬಂದಿರುವುದು ನಿಮಗಲ್ಲ ಎಂದು ಹೇಳುವ ಮೂಲಕ ಅಧಿಕಾರಿಗಳು ಬಾಬು ಪಿಲಾರ್ ಗೆ ಅವಮಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನೀವು ಪ್ರಶಸ್ತಿಗೆ ಭಾಜನರಾಗಿದ್ದೀರಿ ಎಂದು ಅ.31 ರಂದು ಬಾಬು ಪಿಲಾರ್ ಗೆ ಮಾಹಿತಿ ನೀಡಲಾಗಿತ್ತು. ಬೆಂಗಳೂರಿಗೆ ಬಂದ ಪಿಲಾರ್ ಗೆ ಕುಮಾರಕೃಪ ಅತಿಥಿ ಗೃಹದಲ್ಲಿ ಕೊಠಡಿಯನ್ನೂ ನೀಡಲಾಗಿತ್ತು. ಸಂಜೆ ಪ್ರಶಸ್ತಿ ವಿತರಣೆ ವೇಳೆ ಕೊನೇ ಕ್ಷಣದಲ್ಲಿ ಪ್ರಶಸ್ತಿ ಬಂದಿರುವುದು ನಿಮಗಲ್ಲ ಕಣ್ತಪ್ಪಿನಿಂದ ತಪ್ಪಾಗಿದೆ ಕ್ಷಮಿಸಿ. ಬಾಬು ಪಿಲಾರ್ ಬದಲು ಬಾಬು ಕಿಲಾರ್ ಆಗಬೇಕಿತ್ತು ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಬಾಬು ಪಿಲಾರ್ ಆಯ್ಕೆಯಾಗಿದ್ದರು. ಅಧಿಕಾರಿಗಳ ಯಡವಟ್ಟಿನಿಂದ ಜಿಲ್ಲಾ ಪ್ರಶಸ್ತಿಯೂ ಇಲ್ಲದೇ, ಸುವರ್ಣ ಮಹೋತ್ಸವ ಪ್ರಶಸ್ತಿಯೂ ಸ್ವೀಕರಿಸಲಾಗದೇ ಬಾಬು ಪಿಲಾರ್ ಬೇಸರಗೊಂಡಿದ್ದಾರೆ.
ಪಾರ್ಥಿವ ಶರೀರಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಬಾಬು ಪಿಲಾರ್ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.
Advertisement