69 ನೇ ಕನ್ನಡ ರಾಜ್ಯೋತ್ಸವವನ್ನು ನಾಡಿನಾದ್ಯಂತ ಇಂದು ಅದ್ಧೂರಿಯಿಂದ ಆಚರಿಸಲಾಯಿತು. ರಾಜ್ಯೋತ್ಸವದ ನಿಮಿತ್ತ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ, ಧ್ವಜಾರೋಹಣ ಮಾಡಿ ಕನ್ನಡ ನಾಡಿನ ಸಂಸ್ಕೃತಿ ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಅಭಿಮಾನ ಇದ್ದರೆ ಮಾತ್ರ ಕನ್ನಡ ಉಳಿಸಲು ಬೆಳೆಸಲು ಸಾಧ್ಯ. ಯಾರಿಗೆ ಕನ್ನಡ ಬರಲ್ಲ, ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ, ಕನ್ನಡ ಮತ್ತೆ ಕನ್ನಡಿಗರಿಗೆ ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ, ಇಂತವರ ವಿರುದ್ಧ ಸರ್ಕಾರ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ತಗೊಳ್ಳುತ್ತದೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ. ಅನುದಾನದ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ತಾರತಮ್ಯವಾಗಿದೆ ಎಂದೂ ಸಿಎಂ ಇದೇ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸುವರ್ಣ ಮಹೋತ್ಸವ ಪ್ರಶಸ್ತಿಯ ಮೊತ್ತವನ್ನು 50 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 50 ಮಹಿಳಾ ಸಾಧಕಿಯರಿಗೆ ಮತ್ತು 50 ಪುರುಷ ಸಾಧಕರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಈಗಾಗಲೇ ಘೋಷಣೆ ಮಾಡಿದೆ. ಇದೇ ವೇಳೆ ರಾಜ್ಯ ಸರ್ಕಾರದಿಂದ ಕೊಡಮಾಡಲಾಗುವ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು 69 ಮಂದಿ ವಿಜೇತರಿಗೆ ಪ್ರದಾನ ಮಾಡಲಾಯಿತು.
ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಒತ್ತಾಯಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಯತ್ನಾಳ್, ‘ವಕ್ಫ್ ಮಂಡಳಿಯು ದೇಶದಾದ್ಯಂತ ರೈತರು, ಭೂಮಾಲೀಕರು, ದೇವಸ್ಥಾನಗಳು, ಟ್ರಸ್ಟ್‌ಗಳು ಮತ್ತು ಮಠಗಳ ಜಮೀನುಗಳ ಮೇಲೆ ಹಕ್ಕು ಸಾಧಿಸುವ ಅನಿಯಂತ್ರಿತ, ಸ್ಪಷ್ಟ ಉಲ್ಲಂಘನೆಯನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ, ದೇಶದ ಎಲ್ಲಾ ಪ್ರಜೆಗಳಿಗೂ ಭೂಮಿಯ ಮೇಲೆ ಸಮಾನ ಹಕ್ಕಿದೆ. ವಕ್ಫ್‌ನ ಉದ್ದೇಶವು ಕಲ್ಯಾಣ ಮತ್ತು ಸಮಾಜ ಸೇವೆಯಾಗಿದ್ದರೆ, ಭಾರತವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಪಕ್ಷಪಾತ ಮತ್ತು ಧಾರ್ಮಿಕ ತಾರತಮ್ಯವಿಲ್ಲದೆ ಇದನ್ನು ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವಾಗ ನಗರದಲ್ಲಿ ಸಂಭವಿಸಿದ ಅವಘಡದಲ್ಲಿ ಮಕ್ಕಳು ಸೇರಿದಂತೆ 8ಕ್ಕೂ ಜನರಿಗೆ ಗಾಯಗಳಾಗಿವೆ. ಗಾಯಗೊಂಡಿರುವ ಮೂವರು ಮಕ್ಕಳು ನಾರಾಯಣ ನೇತ್ರಾಲಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಿಂಟೋ ಆಸ್ಪತ್ರೆಯಲ್ಲಿ 5 ವರ್ಷದ ಬಾಲಕ ಮತ್ತು 18 ವರ್ಷದ ಯುವಕ ಸೇರಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಇಬ್ಬರು ಬೇರೆಯವರು ಪಟಾಕಿ ಸಿಡಿಸುವುದನ್ನು ಸಮೀಪದಲ್ಲಿ ನಿಂತು ನೋಡುವಾಗ ಸಿಡಿದ ಪಟಾಕಿ ಕಣ್ಣಿಗೆ ತಾಕಿ ಗಾಯಗಳಾಗಿವೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ವರದಿಯಾಗಿದೆ. ಇಬ್ಬರು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಕಾರೊಂದನ್ನು ಹಿಂಬಾಲಿಸಿ, ಅಡ್ಡಗಟ್ಟಿ ಕಾರಿನ ಗಾಜಿಗೆ ಕಲ್ಲು ಹೊಡೆದು ಪುಂಡಾಟ ನಡೆಸಿದ್ದು, ಘಟನೆಯಲ್ಲಿ 5 ವರ್ಷದ ಬಾಲಕನಿಗೆ ಗಾಯವಾಗಿರುವ ಘಟನೆ ಪರಪ್ಪನ ಅಗ್ರಹ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅನೂಪ್ ಜಾರ್ಜ್ ಮತ್ತು ಅವರ ಪತ್ನಿ ಜಿಸ್ ಜೇಕಬ್ ಇಬ್ಬರೂ ಟೆಕ್ಕಿಗಳಾಗಿದ್ದು, ತಮ್ಮ ಮಗ ಮತ್ತು 11 ವರ್ಷದ ಮಗಳೊಂದಿಗೆ ದೀಪಾವಳಿ ಶಾಪಿಂಗ್ ಮುಗಿಸಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಅನೂಪ್ ಅವರು ಕಾರನ್ನು ನಿಲ್ಲಿಸದೆ ಮುಂದೆ ಸಾಗುತ್ತಿದ್ದಾಗ ದುಷ್ಕರ್ಮಿಗಳು ಕಾರಿನ ಮೇಲೆ ಕಲ್ಲು ಎಸೆದಿದ್ದಾರೆ. ಪರಿಣಾಮ ಐದು ವರ್ಷದ ಮಗುವಿಗೆ ಕಲ್ಲು ತಾಗಿ ತಲೆಗೆ ಗಂಭೀರ ಗಾಯವಾಗಿದೆ. ಘಟನೆ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement