ಹುಬ್ಬಳ್ಳಿ: ವಕ್ಫ್ ಜಮೀನಿಗೆ ಸಂಬಂಧಿಸಿದ ಎಲ್ಲಾ ನೋಟಿಸ್‌ಗಳನ್ನು ಹಿಂತೆಗೆದುಕೊಳ್ಳುವ ರಾಜ್ಯ ಸರ್ಕಾರದ ನಿರ್ಧಾರ ಉಪ ಚುನಾವಣೆ ವೇಳೆ ರೈತರನ್ನು ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಕ್ಫ್ ಕಾನೂನು ಚೆನ್ನಾಗಿ ಗೊತ್ತಿದೆ, ಉಪ ಚುನಾವಣೆ ವೇಳೆ ರೈತರನ್ನು ದಿಕ್ಕು ತಪ್ಪಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ನೋಟಿಸ್ ಹಿಂಪಡೆಯುವ ಉದ್ದೇಶ ಈಡೇರುವುದಿಲ್ಲ, ಯಾವುದೇ ಸಮಯದಲ್ಲಿ ನೋಟಿಸ್ ನೀಡಬಹುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರೈತರ ಹಿತ ಹಾಗೂ ಅವರ ಜಮೀನಿನ ಭದ್ರತೆಯ ಬಗ್ಗೆ ನಿಜವಾಗಿಯೂ ಆಸಕ್ತಿ ಇದ್ದರೆ ಈ ನೋಟಿಫಿಕೇಶನ್‌ಗಳನ್ನು ಹೊರಡಿಸಿರುವ ಗೆಜೆಟ್ ಅಧಿಸೂಚನೆಯನ್ನು ಹಿಂಪಡೆಯಬೇಕು. ಆ ಗೆಜೆಟ್ ಅಧಿಸೂಚನೆಯನ್ನು ಹಿಂಪಡೆಯಲು ನವೆಂಬರ್ 4 ರಂದು ಬಿಜೆಪಿ ಎಲ್ಲಾ ವಕ್ಫ್ ಸಮಸ್ಯೆಗಳ ವಿರುದ್ಧ ದೊಡ್ಡ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದರು
ಈ ಮಧ್ಯೆ ವಕ್ಫ್ ಆಸ್ತಿ ಅಲ್ಲಾನದ್ದು, ಅದನ್ನು ಕಾಪಾಡಿಕೊಳ್ಳುವುದು ನಿಮ್ಮ ಡ್ಯೂಟಿ, ಅದನ್ನು ಮರಳಿ ಪಡೆಯಲು ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳಬೇಡಿ. ಕಾಂಪ್ರಮೈಸ್ ಮಾಡಿಕೊಂಡರೆ ನಾವೇನೂ ಮಾಡಲು ಸಾಧ್ಯವಾಗುವುದಿಲ್ಲ. ಊಪರ್ ವಾಲಾ ಎಲ್ಲವನ್ನೂ ನೋಡುತ್ತಿರುತ್ತಾನೆ 2022ರಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಬಿಜೆಪಿಗೆ ಇರುಸು ಮುರುಸು ತರಿಸಿದೆ.
Advertisement