ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ; ವಕ್ಫ್: ರೈತರಿಗೆ ನೀಡಲಾದ ನೊಟೀಸ್ ಹಿಂಪಡೆಯಲು ಸಿಎಂ ಸೂಚನೆ; ವಕ್ಫ್ ವಿಚಾರವಾಗಿ ನ.04 ರಿಂದ ಯತ್ನಾಳ್ ಅಹೋರಾತ್ರಿ ಧರಣಿ; ಇವು ಇಂದಿನ ಪ್ರಮುಖ ಸುದ್ದಿಗಳು 03-11-2024

News bulletin
ಸುದ್ದಿ ಮುಖ್ಯಾಂಶಗಳುonline desk

1. ನಟ, ನಿರ್ದೇಶಕ ಗುರುಪ್ರಸಾದ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಸಾಲದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುಪ್ರಸಾದ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಗುರುಪ್ರಸಾದ್ ನಿಧನಕ್ಕೆ ಅಭಿಮಾನಿಗಳು ಮತ್ತು ಹಲವು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಗುರುಪ್ರಸಾದ್ ‘ಮಠ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ತಾವು ನಿರ್ದೇಶಿಸಿದ್ದ ಮೊದಲ ಚಿತ್ರಕ್ಕೆ ಗುರುಪ್ರಸಾದ್ ರಾಜ್ಯ ಪ್ರಶಸ್ತಿ ಪಡೆದಿದ್ದರು. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಗುರುಪ್ರಸಾದ್ ಅಂತ್ಯಕ್ರಿಯೆ.

2. ಹಾಸನಾಂಬೆ ದೇವಾಲಯ ದರ್ಶನ ಅಂತ್ಯ

ಹಾಸನದ ಅದಿ ದೇವತೆ ಹಾಸನಾಂಬೆ ತಾಯಿಯ ದರ್ಶನ ಅಂತ್ಯಗೊಂಡಿದೆ. 9 ದಿನಗಳಲ್ಲಿ 20 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಅಕ್ಟೋಬರ್​ 24 ರಂದು ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್​ 25 ರಿಂದ ನವೆಂಬರ್​ 03 ನಸುಕಿನ ಜಾವ 6 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹಾಸನಾಂಬ ದೇಗುಲಕ್ಕೆ 9 ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದು ಬಂದಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಬೆಳಗ್ಗೆ 11 50ರ ನಂತರ ದೇವಿಯ ವಿಶ್ವರೂಪ ದರ್ಶನ ಬಳಿಕ ಇಂದು ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ.

3. ವಕ್ಫ್: ರೈತರಿಗೆ ನೀಡಲಾದ ನೊಟೀಸ್ ಹಿಂಪಡೆಯಲು ಸಿಎಂ ಸೂಚನೆ

ವಕ್ಫ್‌ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಂದಾಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಮತ್ತು ವಕ್ಫ್‌ ಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದ ಅವರು ಇನ್ನು ಮುಂದೆ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಕ್ಫ್‌ ಜಮೀನು ವಿಚಾರದಲ್ಲಿ ಇತ್ತೇಚೆಗೆ ನಡೆದಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ನೋಟಿಸ್‌ ವಿಚಾರದಲ್ಲಿ ಕೆಲ ಅಧಿಕಾರಿಗಳು ಕೈಗೊಂಡಿರುವ ಕ್ರಮದ ಬಗ್ಗೆಯೂ ಗರಂ ಆದರು. ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಯವರು, ವಕ್ಫ್‌ ವಿಚಾರವನ್ನು ಜೆಡಿಎಸ್‌ ಮತ್ತು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಈ ಮೂಲಕ ರಾಜ್ಯದಲ್ಲಿ ಶಾಂತಿ ಕದಡುವ ದುಷ್ಟ ಪ್ರಯತ್ನವನ್ನು ಆ ಪಕ್ಷಗಳು ಜಂಟಿಯಾಗಿ ಮಾಡುತ್ತಿವೆ ಎಂದು ಆರೋಪಿಸಿದರು.

4. ವಕ್ಫ್: ನ.04 ರಿಂದ ಯತ್ನಾಳ್ ಅಹೋರಾತ್ರಿ ಧರಣಿ

ರೈತರು, ಸಂಘ-ಸಂಸ್ಥೆಗಳ, ಮಠಗಳ ಮತ್ತು ಸರ್ಕಾರಿ ಜಮೀನುಗಳ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ನಮೂದು ಮಾಡಿರುವುದನ್ನು ತೆಗೆಯುವಂತೆ ಒತ್ತಾಯಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನ.04 ರಿಂದ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗು ಶಾಸಕ ಬಸನಗೌಡ ಪಾಟೀಲ​ ಯತ್ನಾಳ್​ ಹಾಗೂ ಬೆಂಬಲಿಗರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕಚೇರಿ ಹೊರ ಭಾಗದಲ್ಲಿ ಅಹೋರಾತ್ರಿ ಅನಿರ್ಧಿಷ್ಟಾವಧಿ ಹೋರಾಟ ಧರಣಿ ನಡೆಸಲಿದ್ದಾರೆ. ವಕ್ಫ್​ ಕಾಯ್ದೆಯನ್ನು ರದ್ದುಪಡಿಸಬೇಕು. ಇಡೀ ದೇಶದ ಎಲ್ಲ ರಾಜ್ಯಗಳಲ್ಲಿಯ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

5. ನ.01 ರಂದು ಬೆಳಗಾವಿಯಲ್ಲಿ ಕರಾಳ ದಿನ: ಎಂಇಎಸ್ ನ 1,500 ಮಂದಿ ವಿರುದ್ಧ FIR

ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಮಹರಾಷ್ಟ್ರ ಏಕೀಕರಣ ಸಮಿತಿಯ 46 ಜನ ಮುಖಂಡರು ಸೇರಿದಂತೆ 1,500 ಜನರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಂಇಎಸ್​ ಕಾರ್ಯಕರ್ತರು ನವೆಂಬರ್ 1ರಂದು ಜಿಲ್ಲಾಡಳಿತ ಅನುಮತಿ ಇಲ್ಲದೇ ಸಂಭಾಜಿ ಮೈದಾನದಿಂದ ಮರಾಠಾ ಮಂದಿರವರೆಗೂ ಮೆರವಣಿಗೆ ಮಾಡುವ ಮೂಲಕ ಕರ್ನಾಟಕ ಸರ್ಕಾರದ ಸಾರ್ವಭೌಮತ್ವ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರು.

6. ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ 3 ಸಾವು

ಒಂದೇ ಕುಟುಂಬದ ಮೂವರು ವ್ಯಕ್ತಿಗಳು ಕೆರೆಯಲ್ಲಿ ಮುಳುಗಿ ಸ್ಥಳದಲ್ಲೇ ಸಾವನ್ನಪ್ಪಿರುವಹ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಂಬತ್ತನಹಳ್ಳಿ ಗ್ರಾಮದ ಬಳಿ ನಡೆದಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಸಂಬಂಧಿಗಳು ಊಟಕ್ಕೆ ಸೇರಿದ್ದ ರಂಜಿತ್, ರಮ್ಯಾ ಅಭಿಲಾಶ್ ಊಟದ ನಂತರ ಈಜಾಡಲು ಕೆರೆಗೆ ಇಳಿದಿದ್ದಾರೆ. ಆದರೆ ಆಳ ಅರಿಯದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್​ಪಿ ಕುಶಲ್ ಚೌಕ್ಸೆ, ಎಎಸ್ಪಿ ಆರ್.ಐ ಖಾಸಿಂ, ಡಿವೈಎಸ್​ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com