ಮೈಸೂರು: ಸಾಂಸ್ಕೃತಿಕ ನಗರಿ ಖ್ಯಾತಿಯ ಮೈಸೂರಿನಲ್ಲಿ ಮತ್ತೊಂದು ಗ್ಯಾಂಗ್ ರೇಪ್ ನಡೆದಿದೆ. ಪಬ್ ವೊಂದರಲ್ಲಿ ಭೇಟಿಯಾದ ಇಬ್ಬರು ವ್ಯಕ್ತಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವುದಾಗಿ ವರದಿಯಾಗಿದೆ. ಭಾನುವಾರ ಈ ಘಟನೆ ನಡೆದಿದ್ದು, ಸಂತ್ರಸ್ತೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗರದ ಪಬ್ ವೊಂದರಲ್ಲಿ ಆರೋಪಿಗಳು ಹಾಗೂ ಮಡಿಕೇರಿ ಮೂಲದ ಯುವತಿ ಭೇಟಿಯಾಗಿದ್ದಾರೆ. ಬಳಿಕ ದುಷ್ಕರ್ಮಿಗಳು ಆಕೆಗೆ ಆಮಿಷವೊಡ್ಡುವ ಮೂಲಕ ಪ್ರತ್ಯೇಕ ಸ್ಥಳವೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. 2021 ರ ಆಗಸ್ಟ್ 24 ರಂದು ನಡೆದ ಗ್ಯಾಂಗ್ ರೇಪ್ ಘಟನೆ ನಂತರ ಮತ್ತೆ ಅಂತಹುದೇ ಘಟನೆ ಮರುಕಳಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಸದ್ಯ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ ಆರೋಪಿ ಕೊಡಗು ಮೂಲದವನಾದರೆ, ಇನ್ನೊಬ್ಬ ಮೈಸೂರಿನವನು ಎಂದು ಹೇಳಲಾಗಿದೆ. ಸಂತ್ರಸ್ತ ಯುವತಿಯು ಮೈಸೂರಿನಲ್ಲಿ ನೆಲೆಸಿದ್ದರಾ? ಅಥವಾ ಮಡಿಕೇರಿಯಿಂದ ಆಕೆಯನ್ನು ಅಪಹರಣ ಮಾಡಿಕೊಂಡು ಮೈಸೂರಿಗೆ ಕರೆತಂದು, ಆರೋಪಿಗಳು ಈ ಹೀನ ಕೃತ್ಯವನ್ನ ಎಸಗಿದ್ದಾರಾ ಅನ್ನೋದರ ಬಗ್ಗೆ ನಿಖರ ಮಾಹಿತಿ ತಿಳಿದು ಬರಬೇಕಿದೆ.
ಕಳೆದ ಕೆಲ ವರ್ಷಗಳ ಹಿಂದೆ ಅಂದರೆ 2021ರಲ್ಲಿ ಕಾಲೇಜು ಅವಧಿ ಮುಗಿದ ನಂತರ ಪಾರ್ಕ್ ವೊಂದರಲ್ಲಿ ಸ್ನೇಹಿತನೊಂದಿಗೆ ಕುಳಿತಿದ್ದ ಸಂತ್ರಸ್ತೆಯನ್ನು ಚಾಮುಂಡಿ ಬೆಟ್ಟದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಏಳು ಮಂದಿ ಕಿರಾತಕರು ಸಾಮೂಹಿಕ ಗ್ಯಾಂಗ್ ರೇಪ್ ನಡೆಸಿದ್ದರು. ಅಲ್ಲದೇ ರೂ. 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಆಕೆಯ ಸ್ನೇಹಿತನನ್ನು ಮನಸೋ ಇಚ್ಚೆ ಥಳಿಸಿದ್ದರು. ಬಳಿಕ ಸಂತ್ರಸ್ತೆಯನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ತಮಿಳುನಾಡಿನ ಏಳು ಮಂದಿಯನ್ನು ಬಂಧಿಸಿ, ಘಟನೆ ಸಂಬಂಧ 1,499 ಪುಟಗಳ ಚಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದು ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೆ ಗ್ಯಾಂಗ್ ರೇಪ್ ಘಟನೆ ನಡೆದಿದ್ದು, ಮೈಸೂರಿನ ಜನತೆ ಆತಂಕಗೊಂಡಿದ್ದಾರೆ.
Advertisement