ಅಬಕಾರಿ ಸಚಿವ ತಿಮ್ಮಾಪುರ ವಿರುದ್ಧ ಲಂಚ ಆರೋಪ; ಕೇಂದ್ರ ಸಚಿವ HDK ನಿಖಿಲ್ ವಿರುದ್ಧ FIR; MudaScam: ಸಿದ್ದರಾಮಯ್ಯ, ಪಾರ್ವತಿ ಸೇರಿದಂತೆ ಹಲವರಿಗೆ ಕೋರ್ಟ್ ನೋಟಿಸ್! ಇವು ಇಂದಿನ ಪ್ರಮುಖ ಸುದ್ದಿಗಳು 05-11-24

ಅಬಕಾರಿ ಸಚಿವ ತಿಮ್ಮಾಪುರ ವಿರುದ್ಧ ಲಂಚ ಆರೋಪ; ಕೇಂದ್ರ ಸಚಿವ HDK ನಿಖಿಲ್ ವಿರುದ್ಧ FIR; MudaScam: ಸಿದ್ದರಾಮಯ್ಯ, ಪಾರ್ವತಿ ಸೇರಿದಂತೆ ಹಲವರಿಗೆ ಕೋರ್ಟ್ ನೋಟಿಸ್! ಇವು ಇಂದಿನ ಪ್ರಮುಖ ಸುದ್ದಿಗಳು 05-11-24

1. ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧ ಲಂಚ ಆರೋಪ!

ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ, ವಕ್ಫ್ ಆಸ್ತಿ ವಿವಾದಗಳಿಂದ ಕೆಂಗೆಟ್ಟಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದಂಗಡಿಗಳಿಂದ 'ಮಂಥ್ಲಿ ಮನಿ' ಹೆಸರಿನಲ್ಲಿ ಲಂಚ ಪಡೆಯುತ್ತಿದ್ದಾರೆ ಎಂದು ಕರ್ನಾಟಕ ವೈನ್ ಮರ್ಚೆಂಟ್ ಅಸೋಸಿಯೇಷನ್ ಆರೋಪಿಸಿದೆ. ಅಲ್ಲದೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ವಿರುದ್ಧ ಆರೋಪ ಮಾಡಿದೆ. ತಿಮ್ಮಾಪುರ ಅವರ ಖಾತೆ ಬದಲಾವಣೆ ಮಾಡುವಂತೆ ಸಿಎಂಗೆ ಒತ್ತಾಯಿಸಿದ್ದಾರೆ. ಅಲ್ಲದೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನ.20ರಂದು ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ. ಮದ್ಯದಂಗಡಿಗಳಿಂದ 18 ಕೋಟಿ ವಸೂಲಿ ಮಾಡಿದ್ದು, ಅದರಲ್ಲಿ 13 ಕೋಟಿಯನ್ನು ಸಚಿವ ತಿಮ್ಮಾಪುರಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

2. HDK, ನಿಖಿಲ್ ವಿರುದ್ಧ ಎಫ್ಐಆರ್ ದಾಖಲು

ಹಿರಿಯ ಐಪಿಎಸ್ ಅಧಿಕಾರಿಯೊಬ್ಬರಿಗೆ ಬೆದರಿಕೆ ಮತ್ತು ಸುಳ್ಳು ಆರೋಪ ಮಾಡಿದ ಆರೋಪದಡಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಸಹಾಯಕ ಸುರೇಶ್ ಬಾಬು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಡಿಜಿಪಿ ಚಂದ್ರಶೇಖರ್ ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಿಎನ್ಎಸ್ ಸೆಕ್ಷನ್ 224ರ ಅಡಿಯಲ್ಲಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದಲ್ಲಿ ಹೆಚ್ಡಿ ಕುಮಾರಸ್ವಾಮಿ A1 ಆಗಿದ್ದರೆ ನಿಖಿಲ್ ಕುಮಾರಸ್ವಾಮಿ A2 ಮತ್ತು ಸುರೇಶ್ ಬಾಬು A3 ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮನ್ನು ಗುರಿಯಾಗಿಸಿಕೊಂಡಿದೆ. ನಾನು ಎಫ್‌ಐಆರ್ ಮತ್ತು ದೂರಿನ ವಿಷಯವನ್ನು ಓದಿದ್ದೇನೆ. ಇದು ಸಂಪೂರ್ಣವಾಗಿ ಹಾಸ್ಯಾಸ್ಪದ ಮತ್ತು ಸ್ಪಷ್ಟವಾಗಿ ದುರುದ್ದೇಶಪೂರಿತವಾಗಿದೆ ಎಂದು ಹೇಳಿದರು.

3. ಮುಡಾ ಹಗರಣ: ಪಾರ್ವತಿ ಸಿದ್ದರಾಮಯ್ಯ ಸೇರಿದಂತೆ ಹಲವರಿಗೆ ಹೈಕೋರ್ಟ್ ನೋಟಿಸ್ ಜಾರಿ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿಎಂ ಪಾರ್ವತಿ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಸಿದ್ದರಾಮಯ್ಯ ಭಾವ ಮಲ್ಲಿಕಾರ್ಜುನ ಸ್ವಾಮಿ, ಕೇಂದ್ರ ಸರ್ಕಾರ, CBI, ರಾಜ್ಯ ಸರ್ಕಾರ, ರಾಜ್ಯ ಪೊಲೀಸ್ ಮುಖ್ಯಸ್ಥರು, ಲೋಕಾಯುಕ್ತ ಪೊಲೀಸರು ಮತ್ತು ಇತರರಿಗೂ ಸಹ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣದ ಸ್ವತಂತ್ರ, ನ್ಯಾಯಸಮ್ಮತ, ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಲೋಕಾಯುಕ್ತ ಪೊಲೀಸರಿಂದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ನಿರ್ದೇಶನ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಹೈಕೋರ್ಟ್ ಈ ನೋಟಿಸ್ ಜಾರಿ ಮಾಡಿದೆ.

4. ತಹಶೀಲ್ದಾರ್‌ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ

ಬೆಳಗಾವಿಯ ತಹಶೀಲ್ದಾರ್‌ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 12 ವರ್ಷಗಳಿಂದ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಸಿ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆಯಷ್ಟೇ ಸವದತ್ತಿ ತಹಶೀಲ್ದಾರ್ ಕಚೇರಿಗೆ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಈಗ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿಯೇ ರುದ್ರಣ್ಣ ನೇಣಿಗೆ ಶರಣಾಗಿದ್ದಾರೆ. ತಹಶೀಲ್ದಾರ್ ಕಚೇರಿ ಸಿಬ್ಬಂದಿ ಕಚೇರಿ ತೆರೆದಾಗ ರುದ್ರಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

5. ಸಂಡೂರು ಗ್ರಾಮದ ಚೆಕ್‌ಪೋಸ್ಟ್‌ ನಲ್ಲಿ 27 ಲಕ್ಷ ವಶ!

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಸಂಡೂರು ವ್ಯಾಪ್ತಿಯ ಡಿ.ಬಸಾಪುರ ಗ್ರಾಮದ ಚೆಕ್‌ಪೋಸ್ಟ್‌ ನಲ್ಲಿ ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ 27 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಂಡೂರು ಉಪಚುನಾವಣೆಯಿಂದಾಗಿ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ದಾಖಲೆ ಇಲ್ಲದ ನಗದು ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

6. ನೀರಿನ ಟ್ಯಾಂಕ್‌ಗೆ 1 ತಿಂಗಳ ಮಗು ಎಸೆದು ಕೊಂದ ದುಷ್ಕರ್ಮಿಗಳು

ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ ಒಂದು ತಿಂಗಳ ಮೂರು ದಿನದ ಗಂಡು ಮಗುವನ್ನು ಅಪರಿಚಿತ ದುಷ್ಕರ್ಮಿಗಳು ಮನೆಯ ಓವರ್‌ಹೆಡ್ ನೀರಿನ ಟ್ಯಾಂಕ್‌ಗೆ ಎಸೆದು ಕೊಲೆ ಮಾಡಿದ್ದಾರೆ. ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಇಗ್ಗಲೂರಿನಲ್ಲಿ ಈ ಘಟನೆ ನಡೆದಿದೆ. ಸೂರ್ಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನ್ಯಜಾತಿಗೆ ಸೇರಿದ ದಂಪತಿ ಪೋಷಕರ ವಿರೋಧದ ನಡುವೆಯೇ ಮದುವೆಯಾಗಿದ್ದರು. ಹೀಗಾಗಿ ತಮ್ಮ ಪೋಷಕರಿಗೆ ಗೊತ್ತಿರುವವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com