ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಸಿದ್ದರಾಮಯ್ಯ ಬುಧವಾರ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಯಾವುದೇ ಒತ್ತಡ ಇಲ್ಲದೆ ವಿಚಾರಣೆ ಎದುರಿಸಿದ್ದೇನೆ. ಮತ್ತೆ ವಿಚಾರಣೆಗೆ ಬರುವಂತೆ ಲೋಕಾಯುಕ್ತ ಅಧಿಕಾರಿಗಳು ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 2 ಗಂಟೆಗಳ ವಿಚಾರಣೆ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ಸಿಎಂ, ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ. ನನ್ನ ಉತ್ತರಗಳನ್ನು ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿಯವರು ಯಾವುದಾದರೂ ಕೇಸ್ ಸಿಬಿಐಗೆ ಕೊಟ್ಟಿದ್ದಾರೆಯೇ? ಸಿಬಿಐ ಯಾರ ಕೈಯಲ್ಲಿದೆ. ಬಿಜೆಪಿ, ಜೆಡಿಎಸ್ ನವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಮತ್ತು ನನ್ನ ಕುಟುಂಬ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ.
ವಕ್ಫ್ ಆಸ್ತಿ ವಿವಾದ ತೀವ್ರಗೊಳ್ಳುತ್ತಿದ್ದು, ರೈತರ ಜಮೀನು, ಮಠದ ಜಮೀನುಗಳನ್ನು ತನ್ನದೆಂದು ಗುರುತಿಸಿದ್ದ ವಕ್ಫ್ ಮಂಡಳಿ ಈಗ ಐತಿಹಾಸಿಕ ಬೀದರ್ ಕೋಟೆ ಮೇಲೆ ಕಣ್ಣು ಹಾಕಿದ್ದು, ಕೋಟೆಯೊಳಗಿನ 17 ಸ್ಮಾರಕಗಳು ತನ್ನ ಆಸ್ತಿ ಎಂದು ಹಕ್ಕು ಪ್ರತಿಪಾದನೆ ಮಾಡಿದೆ. ಈ ಸ್ಮಾರಕಗಳು ಬೀದರ್ ಜಿಲ್ಲಾ ಕೇಂದ್ರ ಪಟ್ಟಣದಲ್ಲಿರುವ ಕೋಟೆಯ ಪ್ರಮುಖ ಹೆಗ್ಗುರುತುಗಳಲ್ಲಿ ಸೇರಿವೆ. ಬೀದರ್ ಕೋಟೆ ಆವರಣದಲ್ಲಿರುವ 60 ಆಸ್ತಿಗಳ ಪೈಕಿ 17 ಆಸ್ತಿಗಳು ವಕ್ಫ್ ಮಂಡಳಿಗೆ ಸೇರಿದ್ದು ಎಂದು ವಕ್ಫ್ ಹೇಳಿದ್ದು, ವಕ್ಫ್ ಗುರುತಿಸಿರುವ ಪಟ್ಟಿಯಲ್ಲಿ ಹೆಸರಾಂತ 16 ಸ್ತಂಭಗಳು ಮಸೀದಿ, ವಿವಿಧ ಬಹಮನಿ ಆಡಳಿತಗಾರರ 14 ಸಮಾಧಿಗಳಿವೆ.
ಬೆಂಗಳೂರಿನ ಮಾದಾವರ-ನಾಗಸಂದ್ರ ಮಾರ್ಗದ ನಮ್ಮ ಮೆಟ್ರೋ ರೈಲು ಸಂಚಾರ ನ.7 ರಿಂದ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ. ಈ ಮಾಹಿತಿಯನ್ನು BMRCL ಖಚಿತಪಡಿಸಿದೆ. ಇಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸಂಸದ ತೇಜಸ್ವಿ ಸೂರ್ಯ ಮೆಟ್ರೋ ಮಾರ್ಗವನ್ನು ಪರಿಶೀಲಿಸಿ ಯಶವಂತಪುರ ಮೆಟ್ರೋ ನಿಲ್ದಾಣದಿಂದ ಮಾದಾವರದವರೆಗೆ ಪ್ರಯಾಣಿಸುವ ಮೂಲಕ ನಾಗಸಂದ್ರ-ಮಾದಾವರದವರೆಗಿನ ವಿಸ್ತರಿತ ಮಾರ್ಗಕ್ಕೆ ಪ್ರಾಯೋಗಿಕ ಚಾಲನೆ ನೀಡಿದರು. ಈ ಹಿಂದೆ ತೇಜಸ್ವಿ ಸೂರ್ಯ ಮೆಟ್ರೋ ಮಾರ್ಗ ಸಂಚಾರಕ್ಕೆ ತ್ವರಿತ ಅನುಮತಿ ನೀಡುವ ವಿಚಾರವನ್ನು ಕೇಂದ್ರ ನಗರಾಭಿವೃದ್ದಿ ಸಚಿವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಅಲ್ಲದೆ, ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನೂ ಹಲವು ಬಾರಿ ಭೇಟಿಯಾಗಿ ವಿಸ್ತರಿತ ಹಸಿರು ಮಾರ್ಗದ ತ್ವರಿತ ಕಾರ್ಯಾಚರಣೆಗೆ ಒತ್ತಾಯಿಸಿದ್ದರು.
ಸಣ್ಣ ನೀರಾವರಿ ಇಲಾಖೆ ಯೋಜನೆಗಾಗಿ ಜಮೀನು ಸ್ವಾಧೀನಪಡಿಸಿಕೊಂಡಿರುವ ರೈತನಿಗೆ ಪರಿಹಾರ ನೀಡಲು ಕಚೇರಿ ವಿಫಲವಾದ ಹಿನ್ನೆಲೆಯಲ್ಲಿ ಕುಮಟಾದ ಸಹಾಯಕ ಆಯುಕ್ತರ ಕಚೇರಿಗೆ ಸೀಲ್ ಹಾಕಲು ಉತ್ತರ ಕನ್ನಡದ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಕುಮಟಾದ ಎಸಿ ಕಚೇರಿಯನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿ ಬೀಗ ಜಡಿದಿದ್ದಾರೆ. ಗೋಕರ್ಣ ಸಮೀಪದ 4 ಗುಂಟಾ ಜಮೀನು ಸ್ವಾಧೀನಪಡಿಸಿಕೊಂಡಿದ್ದು, ಪರಿಹಾರ ನೀಡುವಂತೆ ರೈತ ಉದಯ ಬಾಳಿಗ ಅರ್ಜಿ ಸಲ್ಲಿಸಿದ್ದರು. 2022ರ ಹಿಂದಿನ ಪ್ರಕರಣ ಇದಾಗಿದೆ. ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಬಾಳಿಗಾ ಅವರಿಗೆ ರೂ. 10.58 ಲಕ್ಷ ಪರಿಹಾರ ಬರಬೇಕಿತ್ತು. ಆದರೆ ಹಲವು ಬಾರಿ ಮನವಿ ಮಾಡಿದರೂ ರೈತರಿಗೆ ಸೂಕ್ತ ಪರಿಹಾರ ಸಿಗದ ಕಾರಣ ಕಾನೂನು ಕ್ರಮಕ್ಕೆ ಮುಂದಾಗಿದ್ದರು.
ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಸಹಾಯಕ ಸೋಮು ಮತ್ತಿತರ ಇಬ್ಬರ ವಿರುದ್ಧ FIR ದಾಖಲಿಸಲಾಗಿದೆ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಎಲ್ಲ ಆರೋಪಗಳನ್ನು ಪರಿಶೀಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರುದ್ರಣ್ಣ ಯಡವಣ್ಣವರ, ಆತ್ಮಹತ್ಯೆ ಪತ್ರದಲ್ಲಿ ತಮ್ಮ ಸಾವಿಗೆ ತಹಶೀಲ್ದಾರ್ ಬಸವರಾಜ್ ನಾಗರಾಳ್, ಕಚೇರಿ ಸಿಬ್ಬಂದಿ ಅಶೋಕ್ ಕಬ್ಬಲಿಗಾರ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕ ಸೋಮು ನೇರ ಕಾರಣ ಎಂದು ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ.
Advertisement