ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಅಕ್ರಮ ಪ್ರಕರಣ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮುಡಾ ಸಭೆ ನಡೆಸಿದ್ದು, ಈ ಸಭೆಯಲ್ಲಿ 50:50 ನಿವೇಶನಗಳನ್ನು ರದ್ದು ಮಾಡಲು ಒಮ್ಮತದ ನಿರ್ಣಯ ಕೈಗೊಂಡಿದೆ.
ಇಂದು ನಡೆದ ಮುಡಾ ಸಭೆಯಲ್ಲಿ 50-50 ಅನುಪಾತದಲ್ಲಿ ಹಂಚಿಕೆಯಾದ ಸೈಟಗಳ ಜಪ್ತಿಗೆ ಸದಸ್ಯರು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ವರದಿ ಬಂದ ಬಳಿಕ ಜಪ್ತಿಯ ವರದಿ ಅಂಗೀಕರಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಅಕ್ರಮವಾಗಿ 50:50 ಸೈಟ್ ಪಡೆದವರಿಗೆ ಸಂಕಷ್ಟ ಎದುರಾಗಿದೆ.
ಮುಡಾ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಜಿಟಿ ದೇವೇಗೌಡ ಅವರು, 50:50 ಅನುಪಾತದಡಿ ಮುಡಾ ಸೈಟ್ ಹಂಚಿಕೆ ಬಗ್ಗೆ ಲೋಕಾಯುಕ್ತ, ಇಡಿ, ದೇಸಾಯಿ ಆಯೋಗ ತನಿಖೆ ಮಾಡುತ್ತಿದೆ. 50:50 ಅನುಪಾತ ವಾಪಾಸ್ ಪಡೆಯಬೇಕು. 50:50 ಅಕ್ರಮವಾಗಿರೋದನ್ನ ರದ್ದು ಮಾಡಬೇಕು. ಕಾನೂನುನಾತ್ಮಕವಾಗಿ ಇರುವವರಿಗೆ ಸೈಟ್ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಮೊದಲು ಆಯೋಗದ ತನಿಖಾ ವರದಿ ಬರಲಿ. ನಂತರ ನಿರ್ಧಾರ ಮಾಡೋಣ ಅನ್ನೋ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕ ಕೆ.ಹರೀಶ್ಗೌಡ ಮಾತನಾಡಿ, 50:50 ಅನುಪಾತದಡಿ ನೀಡಿರುವ ಸೈಟ್ ಜಪ್ತಿಗೆ ಸದಸ್ಯರ ಒಪ್ಪಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳೋಣ ಎಂದು ಅಧ್ಯಕ್ಷರು ಹೇಳಿದ್ದಾರೆ. ಮುಡಾ ಸ್ವಚ್ಛವಾಗಬೇಕು ಎಂಬುವುದೇ ಎಲ್ಲಾ ಸದಸ್ಯರ ಅಭಿಪ್ರಾಯ. 2020ರಿಂದ 50:50 ಅನುಪಾತದಡಿ ಸೈಟ್ ಹಂಚಿಕೆ ಮಾಡಲಾಗಿದೆ. ಕೆಲವೆಡೆ ಪರಿಹಾರ ರೂಪದಲ್ಲೂ 50:50 ಅನುಪಾತದಡಿ ಸೈಟ್ ಹಂಚಿಕೆ ಮಾಡಲಾಗಿದೆ. ಎಲ್ಲಾ ದಾಖಲೆಗಳನ್ನ ಇಟ್ಟುಕೊಂಡು ಸಭೆಯಲ್ಲಿ ಮಾತನಾಡಿದ್ದೇನೆ. ಕಳೆದ ಬಾರಿ ನಡೆದ ಸಭೆಯಲ್ಲೂ ಈ ಬಗ್ಗೆ ಚರ್ಚೆ ಮಾಡಲಾಗಿತ್ತು. ದಾಖಲೀಕರಣ ಮಾಡದ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ನಿರ್ಧರಿಸಲಾಗಿದೆ. ಅಲ್ಲದೇ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೂ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
Advertisement