ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್, ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಇನ್ನಿತರ ನಾಯಕರೊಂದಿಗೆ ಇಂದು ವಿಜಯಪುರಕ್ಕೆ ಭೇಟಿ ನೀಡಿ ಸಮಸ್ಯೆ ಎದುರಿಸುತ್ತಿರುವ ರೈತರಿಂದ ಅಹವಾಲು ಸ್ವೀಕರಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಗದಂಬಿಕಾ ಪಾಲ್, ಕೇಂದ್ರ ಸರ್ಕಾರ ‘ವಕ್ಫ್ ಕಾಯ್ದೆಗೆ-2024’ಕ್ಕೆ ತಿದ್ದುಪಡಿ ತರಲು ಹೊರಟಿದೆ. ಕರ್ನಾಟಕದಲ್ಲಿನ ಸಮಸ್ಯೆಗಳ ಬಗ್ಗೆ ಸಂಸದ ತೇಜಸ್ವಿ ಸೂರ್ಯ ನನ್ನ ಗಮನ ಸೆಳೆದಿದ್ದರು. ದೆಹಲಿ ರೀತಿಯಲ್ಲಿ ರಾಜ್ಯದಲ್ಲಿ ಕೂಡ ರೈತರು ವಕ್ಫ್ ಬೋರ್ಡ್ನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೇವಲ ರೈತರ ಕೃಷಿ ಭೂಮಿ ಮಾತ್ರವಲ್ಲ, ಪ್ರಾಚ್ಯವಸ್ತು ಇಲಾಖೆಯ ಪಾರಂಪರಿಕ ತಾಣಗಳನ್ನು ಸಹ ವಕ್ಫ್ ತನ್ನದೆಂದು ಪ್ರತಿಪಾದಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸತ್ಯಾಸತ್ಯತೆ ತಿಳಿದು ವರದಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಜೆಪಿಸಿ ಅಧ್ಯಕ್ಷರು ರಾಜ್ಯಕ್ಕೆ ಭೇಟಿ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ವಕ್ಫ್ ವಿವಾದ ಬಿಜೆಪಿಯ ಸೃಷ್ಟಿ. ನಮ್ಮ ಸರ್ಕಾರ ರೈತರನ್ನು ರಕ್ಷಿಸಲು ಬದ್ಧವಾಗಿದೆ. ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿದ್ದಾರೆ. ವಕ್ಫ್ ಆಸ್ತಿ ವಿಚಾರವಾಗಿ ಧಾರವಾಡ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ 2019ರಿಂದ ಮೊದಲು ನೋಟೀಸ್ ಕೊಟ್ಟಿದ್ದು ಬಿಜೆಪಿ. ಬೊಮ್ಮಾಯಿ ಅವರ ಸರ್ಕಾರವೇ ನೋಟೀಸ್ ನೀಡಿದೆ. ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಜನ ಶಾಂತಿಯಿಂದಿರುವುದು ಬೇಕಾಗಿಲ್ಲ. ರಾಜಕೀಯ ಉದ್ದೇಶದಿಂದ ರಾಜ್ಯಕ್ಕೆ ಜೆಪಿಸಿ ಅಧ್ಯಕ್ಷರು ಭೇಟಿ ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಅಕ್ರಮ ಹಂಚಿಕೆ ಪ್ರಕರಣ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮುಡಾ ಸಭೆ ನಡೆದಿದ್ದು, 50:50 ನಿವೇಶನಗಳನ್ನು ರದ್ದು ಮಾಡಲು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ವರದಿ ಬಂದ ಬಳಿಕ ಜಪ್ತಿಯ ವರದಿ ಅಂಗೀಕರಿಸಲು ತೀರ್ಮಾನಿಸಲಾಗಿದೆ. ಈಮಧ್ಯೆ, ಮುಡಾ ಹಗರಣದ ಸಂಬಂಧ ನಿನ್ನೆಯಷ್ಟೆ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜಾರಿ ನಿರ್ದೇಶನಾಲಯದ ವಿಚಾರಣೆಯ ಭೀತಿ ಎದುರಾಗಿದೆ. ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಮರಿಗೌಡ ಸೇರಿ 7 ಮಂದಿಗೆ ಇ.ಡಿ ಸಮನ್ಸ್ ಕೊಟ್ಟಿದ್ದು ತುರ್ತು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಇವರೆಲ್ಲರ ವಿಚಾರಣೆ ಬಳಿಕ ಸಿಎಂಗೆ ಇ.ಡಿ ನೋಟಿಸ್ ನೀಡುವ ಸಾಧ್ಯತೆ ಇದೆ.
ಹೂವಿನ ಕುಂಡಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದ ದಂಪತಿಯನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಸಿಕ್ಕಿಂ ಮೂಲದ ದಂಪತಿ ಬೆಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಈ ಜೋಡಿ ತಮ್ಮ ಮನೆಯಲ್ಲಿ ಹೂ ಕುಂಡಗಳಲ್ಲಿ ಬೆಳೆದಿರುವ ವಿವಿಧ ಗಿಡಗಳ ವಿಡಿಯೋ ಹಾಗೂ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. 17 ಕುಂಡಗಳ ಪೈಕಿ ಎರಡು ಕುಂಡಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದರು. ಅವರ ಸಾಮಾಜಿಕ ಜಾಲತಾಣದ ಫಾಲೋಯರ್ ಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇವರಿಬ್ಬರೂ ಡ್ರಗ್ಸ್ ದಂಧೆಕೋರರಲ್ಲ ಅಥವಾ ಮಾದಕ ವ್ಯಸನಿಗಳಲ್ಲ ಎಂದು ತಿಳಿದ ಪೊಲೀಸರು ಸ್ಟೇಶನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಕಲಬುರಗಿ ನಗರದಲ್ಲಿರುವ ಐತಿಹಾಸಿಕ ಧಾರ್ಮಿಕ ಕೇಂದ್ರ ಖಾಜಾ ಬಂದೇ ನವಾಜ್ ದರ್ಗಾದ ಸಜ್ಜಾದ ನಶೀರ್ ಡಾ. ಸೈಯದ್ ಶಹಾ ಖುಸ್ರೊ ಹುಸೇನಿ ಇಹಲೋಕ ತ್ಯಜಿಸಿದ್ದಾರೆ. ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಸಂಸ್ಥಾಪಕರಾಗಿದ್ದ ಅವರು ಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿದ್ದರು. ಖಾಜಾ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿದ್ದ ಹುಸೇನಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿತ್ತು. ಸೈಯದ್ ಶಹಾ ಖುಸ್ರೊ ಹುಸೇನಿ ಅವರು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. 1972ರಿಂದಲೇ ಕೆಬಿಎನ್ ಶಿಕ್ಷಣ ಸಂಸ್ಥೆಯೊಂದಿಗೆ ನಂಟು ಹೊಂದಿದ್ದ ಅವರು, ವೈದ್ಯಕೀಯ, ಎಂಜಿನಿಯರಿಂಗ್, ಬಿ.ಇಡಿ ಕಾಲೇಜುಗಳನ್ನು ಪ್ರಾರಂಭಿಸಿದ್ದರು.
Advertisement