ವಕ್ಫ್ ಆಸ್ತಿ ವಿವಾದ: ಹುಬ್ಬಳ್ಳಿ, ವಿಜಯಪುರಕ್ಕೆ JPC ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ; ರೈತರಿಂದ 500 ಅಹವಾಲು ಸ್ವೀಕಾರ

ದಾಖಲೆ ತಿದ್ದುವಿಕೆ, ಮ್ಯುಟೇಶನ್, ವಕ್ಫ್ ದಾಖಲೆ ಬದಲಾವಣೆ ಮಾಡಿರುವುದು ಖಾತ್ರಿಯಾಗಿದೆ. ರಾಜ್ಯ ಸರಕಾರ ಏನು ಮಾಡುತ್ತಿದೆ. ಇದಕ್ಕೆ ಯಾರು ಹೊಣೆ? ಎಂದು ಅವರು ಪ್ರಶ್ನಿಸಿದರು.
 JPC Chairman Pal receives  petitions
ಜಗದಾಂಬಿಕಾ ಪಾಲ್ ಅವರಿಗೆ ಅಹವಾಲು ಸಲ್ಲಿಸಿದ ಸಂಸದ ಗೋವಿಂದ ಕಾರಜೋಳ
Updated on

ಹುಬ್ಬಳ್ಳಿ/ವಿಜಯಪುರ: ವಕ್ಪ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ಜಗದಾಂಬಿಕಾ ಪಾಲ್ ಅಧ್ಯಕ್ಷತೆಯ ವಕ್ಪ್ ಕಾಯ್ದೆ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯು ಶುಕ್ರವಾರ ಸುಮಾರು 500 ಅಹವಾಲುಗಳನ್ನು ಆಲಿಸಿತು.

ಹುಬ್ಬಳ್ಳಿ, ವಿಜಯಪುರ ಮತ್ತು ಬೆಳಗಾವಿಗೆ ಭೇಟಿ ನೀಡಿದ ಪಾಲ್, ರೈತರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಸದಸ್ಯರನ್ನು ಭೇಟಿ ಮಾಡುವ ಮೂಲಕ ವಕ್ಫ್ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಅಹವಾಲು ಸ್ವೀಕರಿಸಿದರು.

ಈ ವೇಳೆ ತಮ್ಮ ಭೂಮಿಯನ್ನು ವಕ್ಫ್ ಮಂಡಳಿ ಆಸ್ತಿ ಎಂದು ಹೇಳಲಾಗುತ್ತಿದೆ ಎಂದು ವಿಜಯಪುರ, ಬೀದರ್, ಕಲಬುರಗಿ, ಹುಬ್ಬಳ್ಳಿ, ಬಾಗಲಕೋಟೆ ಮತ್ತು ಬೆಳಗಾವಿಯ ರೈತರಿಂದ ಸುಮಾರು 500 ಅಹವಾಲುಗಳನ್ನು ಜಗದಾಂಬಿಕಾ ಪಾಲ್ ಸ್ವೀಕರಿಸಿದರು ಎಂದು ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸತ್ಯ ಶೋಧನೆ ಮತ್ತು ನೊಂದವರನ್ನು ಭೇಟಿ ಮಾಡಲು ರಾಜ್ಯಕ್ಕೆ ಭೇಟಿ ನೀಡಿದ್ದೇನೆ. ರೈತರು ಹಾಗೂ ವಿವಿಧ ಸಂಘಟನೆಗಳಿಂದ ಸಂಬಂಧಿಸಿದ ದಾಖಲೆಗಳು, ಮನವಿ ಪತ್ರಗಳನ್ನು ಸ್ವೀಕರಿಸಿದ್ದು, ಅವೆಲ್ಲವನ್ನೂ ಜಂಟಿ ಸಂಸದೀಯ ಸಮಿತಿಯಲ್ಲಿ ಚರ್ಚಿಸಿ ವರದಿಯಲ್ಲಿ ಸೇರಿಸಲಾಗುವುದು ಎಂದು ಜಗದಾಂಬಿಕಾ ಪಾಲ್ ಭರವಸೆ ನೀಡಿದರು.

ರೈತರ ಭೂಮಿ ತೆರವುಗೊಳಿಸದಂತೆ ರಾಜ್ಯ ಸರಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ಸಮಸ್ಯೆ ಬಗೆಹರಿಯುವುದೇ? ದಾಖಲೆ ತಿದ್ದುವಿಕೆ, ಮ್ಯುಟೇಶನ್, ವಕ್ಫ್ ದಾಖಲೆ ಬದಲಾವಣೆ ಮಾಡಿರುವುದು ಖಾತ್ರಿಯಾಗಿದೆ. ರಾಜ್ಯ ಸರಕಾರ ಏನು ಮಾಡುತ್ತಿದೆ. ಇದಕ್ಕೆ ಯಾರು ಹೊಣೆ?" ಎಂದು ಅವರು ಪ್ರಶ್ನಿಸಿದರು.

ನಂತರ ವಿಜಯಪುರದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಗದಾಂಬಿಕಾ ಪಾಲ್, ಪಾಲ್, ವಕ್ಫ್ ಅದಾಲತ್ ನಡೆಸಿ, ವಕ್ಫ್ ಆಸ್ತಿ ಎಂದು ನಿರ್ಧರಿಸಲು ‘‘ಪಾರದರ್ಶಕ ವಕ್ಫ್ ಕಾನೂನು ಜಾರಿಗೆ ಬರುತ್ತಿರುವಾಗ ಇದನ್ನು ಮಾಡುವ ಆತುರವೇನಿತು? ರೈತರು, ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದ್ದು, ಇಂತಹ ಘಟನೆಗಳು ರಾಜ್ಯದಲ್ಲಿ ಏಕೆ ನಡೆದಿದೆ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಉತ್ತರ ನೀಡಬೇಕಾಗಿದೆ ಎಂದರು.

1920 ಮತ್ತು 1930ರಿಂದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಾನೂನು ಜಾರಿಯಾಗುವ ಮುನ್ನವೇ ನೋಟಿಸ್ ನೀಡುತ್ತಿರುವುದು ಏಕೆ? ನೋಟಿಸ್‌ ನೀಡುವುದರ ಜೊತೆಗೆ ಆರ್‌ಟಿಸಿ,ಪಹಣಿ ಮತ್ತು ಮ್ಯುಟೇಶನ್ ರಿಜಿಸ್ಟರ್‌ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ರೈತರು ಹೇಳಿಕೊಂಡಿದ್ದಾರೆ. ಕರ್ನಾಟಕ ವಕ್ಫ್ ಮಂಡಳಿಯು ರಾಜ್ಯಾದ್ಯಂತ ಕನಿಷ್ಠ 53 ಐತಿಹಾಸಿಕ ಪುರಾತತ್ವ ಸಮೀಕ್ಷೆ ಸಂರಕ್ಷಿತ ಸ್ಥಳಗಳನ್ನು ಕೂಡಾ ತಮ್ಮ ಆಸ್ತಿ ಎಂದು ಹೇಳಿಕೊಂಡಿದೆ. ಇದು ವಕ್ಫ್ ಆಸ್ತಿ ಹೇಗೆ? ಎಂದು ಪ್ರಶ್ನಿಸಿದರು.

ಮತ್ತೊಂದೆಡೆ ಪಾಲ್ ರಾಜ್ಯ ಭೇಟಿಯನ್ನು 'ನಾಟಕ ಕಂಪನಿಯ ಟೂರ್' ಮತ್ತು ರಾಜಕೀಯ ಪ್ರೇರಿತ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿನ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಪಾಲ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. JPC ಅಧ್ಯಕ್ಷರು ರಾಜಕೀಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಇದು ಜಂಟಿ ಸಂಸದೀಯ ಸಮಿತಿ ಭೇಟಿ ಅಲ್ಲ, ಬಿಜೆಪಿ ಸದಸ್ಯರು ಬಂದಿದ್ದು, ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಸದೀಯ ಸಮಿತಿ ಭೇಟಿ ನೀಡಿದ್ದಂತೆ ಕಾಣುತ್ತಿಲ್ಲ. ಅಧ್ಯಕ್ಷರು ನಿಯಮ ಮೀರಿ ಏಕಾಂಗಿಯಾಗಿ ಭೇಟಿ ನೀಡುತ್ತಿರುವುದು ರಾಜಕೀಯ ಪ್ರೇರಿತ ಭೇಟಿ ಅನಿಸುತ್ತದೆ. ಸಮಿತಿಯ ಸದಸ್ಯರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಿತಿಯಲ್ಲಿ ಭೇಟಿಯನ್ನು ನಿರ್ಧರಿಸಬೇಕು, ಏಕಪಕ್ಷೀಯವಾಗಿ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಮೊದಲಿಗೆ ವಿಜಯಪುರ ಜಿಲ್ಲೆಯ ಒಂದು ಭಾಗದ ರೈತರು ತಮ್ಮ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಲಾಗಿದೆ ಎಂಬ ಆರೋಪ ಮಾಡಿದ್ದರು. ತದನ ನಂತರ ಇತರ ಕೆಲವು ಸ್ಥಳಗಳಿಂದ ಇದೇ ರೀತಿಯ ಆರೋಪಗಳು ಬಂದಿವೆ.

 JPC Chairman Pal receives  petitions
ವಕ್ಫ್ ಭೂ ವಿವಾದ: ವಿಜಯಪುರಕ್ಕೆ ಭೇಟಿ ನೀಡಿ JPC ಅಧ್ಯಕ್ಷ ಜಗದಾಂಬಿಕಾ ಪಾಲ್ ಹೇಳಿದ್ದಿಷ್ಟು...

ಮಠಗಳಂತಹ ಕೆಲವು ಸಂಘಟನೆಗಳು ಮತ್ತು ಧಾರ್ಮಿಕ ಸಂಸ್ಥೆಗಳು ಕೂಡ ಇದೇ ರೀತಿಯ ಆರೋಪಗಳನ್ನು ಮಾಡುತ್ತಿವೆ. ಗಲಾಟೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ನೀಡಿರುವ ಎಲ್ಲಾ ನೋಟಿಸ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಯಾವುದೇ ಸೂಚನೆ ಇಲ್ಲದೆ ಭೂ ದಾಖಲೆಗಳಲ್ಲಿ ಅನಧಿಕೃತ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಸರ್ಕಾರ ಲ್ಯಾಂಡ್ ಜಿಹಾದ್‌ನಲ್ಲಿ ತೊಡಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆಯೂ ಪಕ್ಷ ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com