ಬೆಂಗಳೂರು: ರೈತನ ಆತ್ಮಹತ್ಯೆಗೂ ವಕ್ಫ್ ಬೋರ್ಡ್‌ನ ಭೂವಿವಾದಕ್ಕೂ ಸಂಬಂಧ ಕಲ್ಪಿಸಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಕೆಲವು ಕನ್ನಡ ನ್ಯೂಸ್ ಪೋರ್ಟಲ್‌ಗಳ ಸಂಪಾದಕರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ನಿನ್ನೆ ತಮ್ಮ ಎಕ್ಸ್ ಖಾತೆಯಲ್ಲಿ ಸುದ್ದಿ ಪೋರ್ಟಲ್‌ಗಳ ಸುದ್ದಿಯನ್ನು ಹಂಚಿಕೊಂಡ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಹಾವೇರಿ ಜಿಲ್ಲೆಯ ರೈತರೊಬ್ಬರು ತಮ್ಮ ಭೂಮಿಯನ್ನು ವಕ್ಪ್ ಮಂಡಳಿ ಸ್ವಾಧೀನಪಡಿಸಿಕೊಂಡಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಪಸಂಖ್ಯಾತ ವರ್ಗದವರನ್ನು ಖುಷಿಪಡಿಸುವ ತರಾತುರಿಯಲ್ಲಿ, ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಕರ್ನಾಟಕದಲ್ಲಿ ದುರಂತ ತಂದೊಡ್ಡಿದ್ದಾರೆ. ದಿನಗಳೆದಂತೆ ರೈತರು, ಹಿಂದೂಗಳ ಬದುಕು ದುಸ್ತರವಾಗುತ್ತಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದರು.
ಆದರೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಸುದ್ದಿ ನಕಲಿ ಎಂದು ಹೇಳಿದ ನಂತರ ಸಂಸದರು ಪೋಸ್ಟ್ ನ್ನು ಡಿಲೀಟ್ ಮಾಡಿದ್ದರು. ಸುದ್ದಿಯು ಸತ್ಯಕ್ಕೆ ದೂರವಾದದ್ದು. ಅಂತಹ ಯಾವುದೇ ಘಟನೆ ವರದಿಯಾಗಿಲ್ಲ. ಇಲ್ಲಿ ಉಲ್ಲೇಖಿಸಿರುವ ರೈತ ರುದ್ರಪ್ಪ ಚನ್ನಪ್ಪ ಬಾಳಿಕಾಯಿ 06/01/2022 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದು ಸಾಲ ಮತ್ತು ಬೆಳೆ ನಷ್ಟದಿಂದ ಅವರು ಆತ್ಮಹತ್ಯೆ ಮಾಡಿಕೊಂಡದ್ದು, ಜಮೀನನ್ನು ವಕ್ಫ್ ಮಂಡಳಿಗೆ ನೀಡಿದ್ದಕ್ಕೆ ಅಲ್ಲ ಎಂದು ಎಸ್ಪಿ ಹೇಳಿದರು.
ಹೀಗಾಗಿ ಸಂಸದರ ವಿರುದ್ಧ ದೂರು ದಾಖಲಿಸಲಾಗಿದ್ದು, ಈ ಬಗ್ಗೆ ಅದಾರ್ ಪೊಲೀಸ್ ಠಾಣೆಯಲ್ಲಿ 174 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಂತಿಮ ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು.
ಹಾವೇರಿ ಜಿಲ್ಲಾ ಪೊಲೀಸರು ನೀಡಿದ ದೂರಿನ ಆಧಾರದ ಮೇಲೆ, ಕಲಂ 353 (2) ಅಡಿಯಲ್ಲಿ ಕನ್ನಡ ದುನಿಯಾ ಇ-ಪೇಪರ್ ಮತ್ತು ಕನ್ನಡ ನ್ಯೂಸ್ ಇ-ಪೇಪರ್ ಸಂಪಾದಕರು ಹಾಗೂ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ (ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಗುಂಪುಗಳ ನಡುವೆ ದ್ವೇಷ, ದ್ವೇಷದ ಭಾವನೆಗಳನ್ನು ಸೃಷ್ಟಿಸಲು ಅಥವಾ ಉತ್ತೇಜಿಸಲು ಹೇಳಿಕೆಗಳನ್ನು ಮಾಡುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು) ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಸಿಇಎನ್ (ಸೈಬರ್ ಕ್ರೈಮ್, ಆರ್ಥಿಕ ಅಪರಾಧಗಳು, ಮಾದಕ ದ್ರವ್ಯ) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
Advertisement