Waqf ನಿಂದಾಗಿ ರೈತ ಸಾವು ಆರೋಪ: BJP ಸಂಸದ ತೇಜಸ್ವಿ ಸೂರ್ಯ ವಿರುದ್ಧ FIR; Bengaluru ಸಂಪಿಗೆ ಥಿಯೇಟರ್ ಮಾಲೀಕನನ್ನು ಕಟ್ಟಿಹಾಕಿ 1 ಕೆಜಿ ಚಿನ್ನ ಕಳ್ಳತನ! ಇವು ಇಂದಿನ ಪ್ರಮುಖ ಸುದ್ದಿಗಳು 08-11-24

Waqf ನಿಂದಾಗಿ ರೈತ ಸಾವು ಆರೋಪ: BJP ಸಂಸದ ತೇಜಸ್ವಿ ಸೂರ್ಯ ವಿರುದ್ಧ FIR; Bengaluru ಸಂಪಿಗೆ ಥಿಯೇಟರ್ ಮಾಲೀಕನನ್ನು ಕಟ್ಟಿಹಾಕಿ 1 ಕೆಜಿ ಚಿನ್ನ ಕಳ್ಳತನ! ಇವು ಇಂದಿನ ಪ್ರಮುಖ ಸುದ್ದಿಗಳು 08-11-24

1. Waqf Boardನಿಂದಾಗಿ ರೈತ ಸಾವು ಆರೋಪ: BJP ಸಂಸದ ತೇಜಸ್ವಿ ಸೂರ್ಯ ವಿರುದ್ಧ FIR

ರೈತನ ಆತ್ಮಹತ್ಯೆಗೂ ವಕ್ಫ್‌ ಬೋರ್ಡ್‌ನ ಭೂವಿವಾದಕ್ಕೂ ಸಂಬಂಧ ಕಲ್ಪಿಸಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಕೆಲವು ಕನ್ನಡ ನ್ಯೂಸ್‌ ಪೋರ್ಟಲ್‌ಗಳ ಸಂಪಾದಕರ ವಿರುದ್ಧ FIR ದಾಖಲಾಗಿದೆ. ನಿನ್ನೆ ತಮ್ಮ ಎಕ್ಸ್ ಖಾತೆಯಲ್ಲಿ ಸುದ್ದಿ ಪೋರ್ಟಲ್‌ಗಳ ಸುದ್ದಿಯನ್ನು ಹಂಚಿಕೊಂಡ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಹಾವೇರಿ ಜಿಲ್ಲೆಯ ರೈತರೊಬ್ಬರು ತಮ್ಮ ಭೂಮಿಯನ್ನು ವಕ್ಪ್ ಮಂಡಳಿ ಸ್ವಾಧೀನಪಡಿಸಿಕೊಂಡಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಪಸಂಖ್ಯಾತ ವರ್ಗದವರನ್ನು ಖುಷಿಪಡಿಸುವ ತರಾತುರಿಯಲ್ಲಿ, ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಕರ್ನಾಟಕದಲ್ಲಿ ದುರಂತ ತಂದೊಡ್ಡಿದ್ದಾರೆ. ದಿನಗಳೆದಂತೆ ರೈತರು, ಹಿಂದೂಗಳ ಬದುಕು ದುಸ್ತರವಾಗುತ್ತಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದರು. ಆದರೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಸುದ್ದಿ ನಕಲಿ ಎಂದು ಹೇಳಿದ ನಂತರ ತೇಜಸ್ವಿ ಸೂರ್ಯ ಪೋಸ್ಟ್ ನ್ನು ಡಿಲೀಟ್ ಮಾಡಿದ್ದರು. 2022ರ ಜೂನ್ 1ರಂದು ರುದ್ರಪ್ಪ ಚನ್ನಪ್ಪ ಬಾಳಿಕಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸಾಲ ಮತ್ತು ಬೆಳೆ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡದ್ದು, ಜಮೀನನ್ನು ವಕ್ಫ್ ಮಂಡಳಿಗೆ ನೀಡಿದ್ದಕ್ಕೆ ಅಲ್ಲ ಎಂದು SP ಹೇಳಿದರು.

2. ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ: ನಿರ್ಮಲಾ ಸೀತಾರಾಮನ್

ಭಾರತದಲ್ಲಿನ ಪ್ರತಿಯೊಂದು ರಾಜ್ಯವು ತನ್ನದೆಯಾದ ವಿಭಿನ್ನ ಸಂಸ್ಕೃತಿ, ಭಾಷೆ ಹಾಗೂ ಸಂಗೀತದ ಪರಂಪರೆ ಹೊಂದಿದ್ದು, ಪ್ರತಿಯೊಂದು ದೇಶದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿವೆ ಹಾಗೂ ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಪ್ರವಾಸೋದ್ಯಮ ಸಚಿವಾಲಯದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಇಂದು ನಡೆದ 'ಮೈಸೂರು ಸಂಗೀತ ಸುಗಂಧ ಉತ್ಸವ'ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಸಂಗೀತ ಪರಂಪರೆಗೆ ಕರ್ನಾಟಕ ಸಂಗೀತದ ಕೊಡುಗೆ ಮಹತ್ವವಾಗಿದ್ದು, ಜಾತಿ, ಧರ್ಮ ಹಾಗೂ ಭಾಷೆ ಮೀರಿ ಇಂದು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಮೈಸೂರಿನ ಕೊಡುಗೆಯನ್ನು ಕೊಂಡಾಡಿದರು.

3. ಭೀಕರ ಅಪಘಾತ: ಇಬ್ಬರು ವಿದ್ಯಾರ್ಥಿಗಳು ದುರ್ಮರಣ

ಶಿವಮೊಗ್ಗ ಹೊರವಲಯದ ತೀರ್ಥಹಳ್ಳಿ ರಸ್ತೆಯಲ್ಲಿ ಜಾಹಿರಾತು ಫಲಕದ ಕಂಬಕ್ಕೆ ಬೈಕ್‌ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಇಬ್ಬರು ಕಾಲೇಜ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ರಸ್ತೆಯ ಹರಕೆರೆ ಸಮೀಪದ ಕಾನೇಹಳ್ಳದ ಬಳಿ ವಿದ್ಯಾರ್ಥಿಗಳು ತೆರಳುತ್ತಿದ್ದ ಬೈಕ್, ನಿಯಂತ್ರಣ ತಪ್ಪಿ ಮರ ಹಾಗೂ ಜಾಹಿರಾತು ಫಲಕ ಅಳವಡಿಸಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನಿಸಾರ್ ಹಾಗೂ ಯಶವಂತ್ ಮೃತಪಟ್ಟಿದ್ದಾರೆ. ಮತ್ತೊಂದೆಡೆ ತುಮಕೂರಿನಲ್ಲಿ ಎತ್ತಿನಹೊಳೆ ನಾಲೆಯ ಕಾಮಗಾರಿ ಬಳಿ ತೆಗೆದಿದ್ದ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಹುಚ್ಚನಹಟ್ಟಿ ಗ್ರಾಮದ ಯದುವೀರ್ ಹಾಗೂ ಮನೋಹರ್ ಮೃತ ದುರ್ದೈವಿಗಳು. ನಿನ್ನೆ ಸಂಜೆ ಹೊರ ಹೋಗಿದ್ದ ಅವರು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಆತಂಕಗೊಂಡ ಪೋಷಕರು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇಂದು ಬೆಳಿಗ್ಗೆ ಇಬ್ಬರು ಬಾಲಕರ ಶವ ಪತ್ತೆಯಾಗಿದೆ.

4. ಸಂಪಿಗೆ ಥಿಯೇಟರ್ ಮಾಲೀಕನನ್ನು ಕಟ್ಟಿಹಾಕಿ 1 ಕೆಜಿ ಚಿನ್ನ ಕಳ್ಳತನ

ಬೆಂಗಳೂರಿನ ಖ್ಯಾತ ಚಿತ್ರಮಂದಿರ ಸಂಪಿಗೆ ಥಿಯೇಟರ್ ಮಾಲೀಕನನ್ನೇ ಕಟ್ಟಿಹಾಕಿ ಮನೆ ದರೋಡೆ ಮಾಡಲಾಗಿತ್ತು. ಥಿಯೇಟರ್ ಮಾಲೀಕ ನಾಗೇಶ್ ಜಯನಗರ 3ನೇ ಬ್ಲಾಕ್ ನಲ್ಲಿ ವಾಸವಾಗಿದ್ದರು. ಅವರ ಮನೆಯಲ್ಲೇ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಗಣೇಶ್ ಹಾಗೂ ಗೀತಾ ಕಳ್ಳತನ ಮಾಡಿದ್ದರು. ನಾಗೇಶ್ ಒಂಟಿಯಾಗಿದ್ದ ಸಮಯದಲ್ಲಿ ಈ ಕೃತ್ಯ ಎಸಗಿದ್ದ ಆರೋಪಿಗಳು, ಅವರ ಕೈಕಾಲು ಕಟ್ಟಿ 2 ಲಕ್ಷ ನಗದು ಹಾಗೂ 1 ಕೆಜಿ ಚಿನ್ನವನ್ನು ದೋಚಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ತನಿಖೆಕೈಗೊಂಡಿದ್ದ ಜಯನಗರ ಠಾಣೆ ಪೊಲೀಸರು ಸಿಸಿಟಿವಿ ಹಾಗೂ ಮೊಬೈಲ್ ವೆಟ್ ವರ್ಕ್ ಆಧರಿಸಿ ಮುಂಬೈನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

5. ಅಪಹರಣವಾಗಿದ್ದ ಎರಡೂವರೆ ವರ್ಷದ ಮಗು ಪತ್ತೆ

ಬೆಂಗಳೂರಿನ ವೈಯಾಲಿಕಾವಲ್ ನಿಂದ ನಾಪತ್ತೆಯಾಗಿದ್ದ ಹೆಣ್ಣು ಮಗುವನ್ನು ದೇವಯ್ಯ ಪಾರ್ಕ್ ಬಳಿ ಪೊಲೀಸುರ ಪತ್ತೆ ಹಚ್ಚಿದ್ದು ಪೋಷಕರಿಗೆ ಒಪ್ಪಿಸಿದ್ದಾರೆ. ಮಗುವನ್ನು ಕರೆದೊಯ್ದಿದ್ದ ಮಹಿಳೆ ಸುಜಾತ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದ್ದು ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಮಲ್ಲೇಶ್ವರಂನ ಪೈಪ್ ಲೈನ್ ರಸ್ತೆಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ನವ್ಯಳನ್ನು ಅಪಹರಿಸಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆಕೈಗೊಂಡಿದ್ದ ವೈಯಾಲಿಕಾವಲ್ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಅಪಹರಿಸಿದ್ದ ಮಹಿಳೆಯನ್ನು ಗುರುತು ಪತ್ತೆ ಹಚ್ಚಿ ನಂತರ ಮಗುವನ್ನು ಪತ್ತೆ ಹಚ್ಚಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com