ಬೆಂಗಳೂರು: ಮಾದಾವರದಿಂದ ನಾಗಸಂದ್ರದವರೆಗಿನ ಬಹು ನಿರೀಕ್ಷಿತ ಮೆಟ್ರೋ ಕಾರ್ಯಾಚರಣೆ ನಿನ್ನೆ ಗುರುವಾರ ಆರಂಭವಾಗಿದ್ದು, ಅಚ್ಚರಿಯೆಂಬಂತೆ ಮಾದಾವರ ನಿಲ್ದಾಣದ ಪ್ಲಾಟ್‌ಫಾರ್ಮ್ 2 ರಿಂದ ಬೆಳಗ್ಗೆ 5 ಗಂಟೆಗೆ ಆರಂಭವಾದ ಮೊದಲ ಸಂಚಾರದಲ್ಲಿ ಒಬ್ಬ ಪ್ರಯಾಣಿಕರೂ ಇರಲಿಲ್ಲ.
ರೈಲಿನಲ್ಲಿ ಒಬ್ಬರೇ ಭದ್ರತಾ ಸಿಬ್ಬಂದಿ ಸಾರ್ವಜನಿಕರನ್ನು ಸ್ವಾಗತಿಸಲು ಕಾಯುತ್ತಿದ್ದರು. ಎರಡನೇ ಟ್ರಿಪ್ ನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ನಂತರ ಹಗಲು ಹೊತ್ತಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಮಾದಾವರದಲ್ಲಿ ಕೊನೆಗೊಂಡ ಮೊದಲ ದಿನದ ರೈಲು ಪ್ರಯಾಣದಲ್ಲಿ 15 ಪ್ರಯಾಣಿಕರನ್ನು ಹೊಂದಿತ್ತು, ಸಾಯಂಕಾಲ 7 ಗಂಟೆ ಹೊತ್ತಿಗೆ 11,093 ಮಂದಿ ಪ್ರಯಾಣಿಕರು ಹಸಿರು ಮಾರ್ಗದಲ್ಲಿ ಪ್ರಯಾಣಿಸಿದ್ದರು.
ರೀಚ್-3ಸಿ ಆರಂಭದ ಬಗ್ಗೆ ಮೊನ್ನೆ ಬುಧವಾರ ಮೆಟ್ರೊ ಹಠಾತ್ ಘೋಷಣೆ ಮಾಡಿದ್ದೇ ನಿನ್ನೆ ಪ್ರಯಾಣಿಕರ ವಿರಳತೆಗೆ ಕಾರಣ ಎನ್ನಬಹುದು. ಮಾದಾವರದಿಂದ ಹೊರಟ ಎರಡನೇ ರೈಲಿಗೆ ಆಡಿಟರ್ ಲಕ್ಷ್ಮೀ ನರಸಿಂಹಯ್ಯ ಮೊದಲ ಪ್ರಯಾಣಿಕರಾಗಿದ್ದರು. ಅವರು ಕೋಲಾರಕ್ಕೆ ತೆರಳಲು ಪ್ರಯಾಣಿಸುತ್ತಿದ್ದರು.
ನಾನು ಮೊದಲ ಪ್ರಯಾಣಿಕನಾಗಿ ಸಂಚಾರ ನಡೆಸಿದ್ದು ನಿಜಕ್ಕೂ ಖುಷಿಯಾಗಿದೆ. ಮೆಟ್ರೋ ಬಳಸಲು ನಾನು ಇನ್ನು ಮುಂದೆ ನಾಗಸಂದ್ರದವರೆಗೆ ಪ್ರಯಾಣಿಸುವ ಅಗತ್ಯವಿಲ್ಲ ಎಂದರು.
ಪ್ರೆಸ್ಟೀಜ್ ಜಿಂದಾಲ್ ಸಿಟಿ ಸಂಕೀರ್ಣದ ನಿವಾಸಿಗಳಿಗೆ, ಮಾದಾವರ ನಿಲ್ದಾಣವು ಅವರ ಮನೆ ಬಾಗಿಲ ಬಳಿ ಬರುತ್ತಿರುವುದರಿಂದ ಖುಷಿಯಾಗಿದ್ದಾರೆ. ಈ ದಿನಕ್ಕಾಗಿ ತಿಂಗಳಾನುಗಟ್ಟಲೆ ಕಾಯುತ್ತಿದ್ದೆ ಎಂದು ಚಿಕ್ಕಬಿದರಕಲ್ಲು ಎಂಬಲ್ಲಿ ರೈಲು ಹತ್ತಿದ ನಿವಾಸಿ ಭೀಮೇಶ ಗಣೇಕರ್ ತಿಳಿಸಿದರು. ಮಾದನಾಯಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿ.ಪಿ.ನಟರಾಜ್ ಅವರು ಮಾದಾವರ ನಿಲ್ದಾಣಕ್ಕೆ ಭೇಟಿ ನೀಡಿ ರೈಲು ಸಂಚಾರದ ನೇರ ಮಾಹಿತಿ ಪಡೆದರು.
ಈ ಮೆಟ್ರೊ ರೈಲು ಸಂಚಾರ ವಿಸ್ತರಣೆಯನ್ನು ಪೂರ್ಣಗೊಳಿಸಲು ನಾಲ್ಕು ವರ್ಷ ಬೇಕಾಯಿತು. ನಾನು ಪ್ರಯಾಣಿಕನಾಗಿ ಇಂದು ಬಂದಿಲ್ಲ, ಆದರೆ ಅವರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆಯೇ ಎಂದು ಪರಿಶೀಲಿಸಲು ಬಂದಿದ್ದೇನೆ ಎಂದರು.
ಮಾದಾವರದಲ್ಲಿ ಕೊನೆಗೊಂಡ ಮೊದಲ ರೈಲಿನಲ್ಲಿ ಎಚ್‌ಆರ್ ಗಿರಿಧರ್, ಪತ್ನಿ ತೇಜಸ್ವಿನಿ ಮತ್ತು ಐದು ವರ್ಷದ ಪ್ರಜ್ಞಾ ಇದ್ದರು. ನಾವು ಇಂದು ಬೆಳಗ್ಗೆ ತಿರುಪತಿಯಿಂದ ಬಂದೆವು. ಮೆಟ್ರೊ ರೈಲಿನ ಈ ವಿಸ್ತೃತ ಕಾರ್ಯಾಚರಣೆಯ ಬಗ್ಗೆ ತಿಳಿದಿಲ್ಲ. ನಾಗಸಂದ್ರದಲ್ಲಿ ಇಳಿದು ಕ್ಯಾಬ್ ನಲ್ಲಿ ಸಂಚರಿಸಲು ನೋಡಿದೆವು. ಮೆಟ್ರೊ ಸಂಚಾರವಿರುವುದು ಕಂಡು ಖುಷಿಯಾಯಿತು ಎಂದರು.
Advertisement