ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಾದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವ್ ಕ್ಷೇತ್ರಗಳ ಉಪ ಚುನಾವಣೆ ಕಾವು ಏರತೊಡಗಿದೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಇವುಗಳ ಪೈಕಿ ಚನ್ನಪಟ್ಟಣ ಕ್ಷೇತ್ರವಂತೂ ಭಾರೀ ಕುತೂಹಲ ಮೂಡಿಸಿದೆ. ಈ ಉಪ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಪ್ರತಿಷ್ಠೆ ಅಡಗಿದೆ. ಚನ್ನಪಟ್ಟಣದಲ್ಲಿ ಯಾರಿಗೆ ಗೆಲುವು ಎಂದು ಚರ್ಚೆಗಳು ಸಾಗಿವೆ. ಜನರು ತಮ್ಮ ತೀರ್ಪು ನೀಡುವುದು ಬಾಕಿ ಇದೆ.
ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ಹೆಚ್. ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದರು. ಆದ್ದರಿಂದ ಉಪ ಚುನಾವಣೆ ಎದುರಾಗಿದೆ. ಬಿಜೆಪಿ-ಜೆಡಿಎಸ್‌ನಿಂದ ಹೆಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ. ಪುತ್ರನನ್ನ ಗೆಲ್ಲಿಸಬೇಕು ಎಂದು ಕುಮಾರಸ್ವಾಮಿ ಮತ್ತು ಮೊಮ್ಮಗನ ಸಲುವಾಗಿ ಹೆಚ್ ಡಿ ದೇವೇಗೌಡರೇ ಅಖಾಡಕ್ಕಿಳಿದು ಪಣತೊಟ್ಟು ಹಳ್ಳಿಹಳ್ಳಿಗಳಲ್ಲಿ ಪ್ರಚಾರವನ್ನು ಕೈಗೊಂಡಿದ್ದಾರೆ.
ಬಿಜೆಪಿ ನಾಯಕರಾಗಿದ್ದ ಸಿ.ಪಿ. ಯೋಗೇಶ್ವರ ಉಪ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿದ್ದಾರೆ. ತವರು ಜಿಲ್ಲೆಯಲ್ಲಿ ಸಿ.ಪಿ. ಯೋಗೇಶ್ವರ ಗೆಲ್ಲಿಸಬೇಕು ಎಂದು ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಅಬ್ಬರದ ಪ್ರಚಾರವನ್ನು ನಡೆಸುತ್ತಿದ್ದಾರೆ.
ಸೂಕ್ಷ್ಮ ಕೇಂದ್ರ: ರಾಜಕೀಯವಾಗಿ ಭಾರೀ ಪೈಪೋಟಿ ಇರುವುದರಿಂದ ಸೂಕ್ಷ್ಮ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಇಂದಿನಿಂದ ಭದ್ರತೆ ಹೆಚ್ಚಿಸಲಾಗಿದೆ. ಇಂದು ಪಟ್ಟಣಕ್ಕೆ ಅರೆಸೇನಾಪಡೆ ಆಗಮಿಸಿದ್ದು ಸೂಕ್ತ ಭದ್ರತೆ ಒದಗಿಸಲಾಗಿದೆ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿ, ಪಾರಾಮಿಲಿಟರಿ ಪಡೆಯ 8 ತುಕಡಿಗಳು ಆಗಮಿಸಿದ್ದು, ಅವುಗಳಲ್ಲಿ 7 ತುಕಡಿಗಳನ್ನು 197 ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ಮಾಹಿತಿ ನೀಡಿ, ಕ್ಷೇತ್ರದ ಬಹಿರಂಗ ಪ್ರಚಾರ ಕಾರ್ಯ ಬುಧವಾರ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ ಎಂದರು.
Advertisement