ಉಡುಪಿ : ಬ್ಯಾಂಕ್‌ನ ಸಾಲ ವಿತರಣೆ ಪ್ರಕ್ರಿಯೆಯಲ್ಲಿ ಸಹಕಾರಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರ ಆರೋಪಕ್ಕೆ ಉಡುಪಿ ಶಾಸಕ ಹಾಗೂ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಸುವರ್ಣ ಶನಿವಾರ ಹೇಳಿದ್ದಾರೆ.
ನಗರದ ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಆರೋಪದ ಬಗ್ಗೆ, ಉಡುಪಿಯ ಶಾಸಕ ಮತ್ತು ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಯಶಪಾಲ್ ಸುವರ್ಣ ಸುದೀರ್ಘ ಸ್ಪಷ್ಟನೆಯನ್ನು ನೀಡಿದ್ದಾರೆ. ರಿಸರ್ವ್ ಬ್ಯಾಂಕ್ ಚೌಕಟ್ಟು ಮೀರಿ, ಬ್ಯಾಂಕ್ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. "ರಿಸರ್ವ್ ಬ್ಯಾಂಕ್ ಹೇಳಿರುವಂತೆ ಮತ್ತು ಬ್ಯಾಂಕಿಂಗ್ ನಿಯಮದ ಪ್ರಕಾರ ನಮ್ಮ ಬ್ಯಾಂಕ್ ನಲ್ಲಿ ಆರ್ಥಿಕ ಶಿಸ್ತು ಇದೆ. ಯಾವುದೇ ತನಿಖೆ, ಅದು ಇಡಿಯಾಗಲಿ, ಸಿಬಿಐ ಆಗಲಿ ಅದಕ್ಕೆ ಬ್ಯಾಂಕ್ ಸಿದ್ದ" ಎಂದು ಯಶಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿಯ ಮಾಜಿ ಶಾಸಕರು (ರಘುಪತಿ ಭಟ್) ನಮ್ಮ ಬ್ಯಾಂಕಿನ ನಮ್ಮ ಗ್ರಾಹಕರು. ಯಾವುದೇ ಒಂದು ಆಧಾರವಿಲ್ಲದೆ, ಆರೋಪ ಮಾಡಿರುವುದು ತಪ್ಪು. ಬ್ಯಾಂಕಿನ ಸದಸ್ಯರಾಗಿ ಪತ್ರ ಬರೆದು, ಬ್ಯಾಂಕಿನ ಮಹಾಸಭೆಯಲ್ಲಿ ವಿಚಾರಗಳನ್ನು ಪ್ರಸ್ತಾಪಿಸಬಹುದಿತ್ತು. ಆದರೆ, ಅವರು ಆ ರೀತಿ ಮಾಡದೇ, ಮಾಧ್ಯಮದವರ ಮುಂದೆ ಬಂದರು ಎಂದು ಯಶಪಾಲ್ ಸುವರ್ಣ ಬೇಸರ ವ್ಯಕ್ತಪಡಿಸಿದರು. ರಘುಪತಿ ಭಟ್ ಅವರು ಆಧಾರ ರಹಿತ ಹೇಳಿಕೆಯನ್ನು ನೀಡಿದ್ದಾರೆ. ಹಾಗಾಗಿ, ಬ್ಯಾಂಕ್ ಅವರಿಗೆ ನೋಟಿಸ್ ಅನ್ನು ನೀಡಿದೆ. ಒಂದು ವಾರದೊಳಗೆ ಅವರು ಸ್ಪಷ್ಟನೆಯನ್ನು ಕೊಡಬೇಕು. ಇಲ್ಲದಿದ್ದಲ್ಲಿ, ಬ್ಯಾಂಕ್ ನಿಯಮಾವಳಿಯ ಪ್ರಕಾರ ಅವರ ಸದಸ್ಯತ್ವ ರದ್ದಾಗುತ್ತದೆ ಎಂದು ಸುವರ್ಣ ಹೇಳಿದ್ದಾರೆ.
ಬ್ಯಾಂಕಿಗೆ ಸಂಬಂಧಿಸಿದಂತೆ ರಘುಪತಿ ಭಟ್ ಅವರಿಗೆ ವಿಚಾರಣೆ ನಡೆಸಲು ಯಾರು ಅಧಿಕಾರ ಕೊಟ್ಟಿರುವುದು? ಮೂರುವರೆ ವರ್ಷದ ಹಿಂದೆ ಎಲ್ಲರ ಖಾತೆಗೂ ಹಣ ಜಮೆಯಾಗಿದೆ. ಸಾಲಗಾರರು ಶೇರ್ ಪಡೆದುಕೊಂಡು, ಡಿವಿಡೆಂಟ್ ವಿತ್ ಡ್ರಾ ಮಾಡಿಕೊಂಡಿದ್ದಾರೆ ಎಂದು ಯಶಪಾಲ್ ಸುವರ್ಣ ಸ್ಪಷ್ಟನೆಯನ್ನು ನೀಡಿದ್ದಾರೆ. ರಘುಪತಿ ಭಟ್ ಅವರು ನಮ್ಮ ಬ್ಯಾಂಕಿನ ಸಾಲಗಾರರೇ ಹೊರತು, ನ್ಯಾಯಾಧೀಶರಲ್ಲ. ಬ್ಯಾಂಕಿನ ಏಳಿಗೆ ಸಹಿಸಲಾಗದೇ, ದುರುದ್ದೇಶದಿಂದ ಇವರು ಅಪವಾದವನ್ನು ಹೊರಿಸಿದ್ದಾರೆ.
ರಘುಪತಿ ಭಟ್ ಅವರು ವಂಚನೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮೂಲಕ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ನಾವು ಅದಕ್ಕೆ ಸಿದ್ಧರಿದ್ದೇವೆ ಎಂದು ಅವರು ಹೇಳಿದರು. ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು. ತಮ್ಮ ಅಪ್ರಾಮಾಣಿಕ ನಡೆ ಮತ್ತು ಆಧಾರ ರಹಿತ ಆರೋಪಗಳಿಂದ ಬ್ಯಾಂಕಿನ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದ್ದು, ಸಾಲದ ಕಂತು ಪಾವತಿಸದಂತೆ ಪ್ರಚೋದನೆ ನೀಡುವ ಸುಸ್ತಿದಾರರು ಮತ್ತು ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವಂತೆ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರು ಈಗಾಗಲೇ ಉಡುಪಿ ಎಸ್‌ಪಿಗೆ ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಅರ್ಬನ್ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್ ಈಗಾಗಲೇ ಸುಸ್ತಿದಾರರಿಂದ ಬಾಕಿ ಇರುವ ಸಾಲದ ಮೊತ್ತವನ್ನು ವಸೂಲಿ ಮಾಡಲು ಎಕ್ಸ್-ಪಾರ್ಟಿ ಆದೇಶವನ್ನು ಜಾರಿಗೊಳಿಸಿದೆ" ಎಂದು ಅವರು ಹೇಳಿದರು, ಬ್ಯಾಂಕಿನ ಎಲ್ಲಾ ವ್ಯವಹಾರ ವಹಿವಾಟುಗಳನ್ನು ಪಾರದರ್ಶಕವಾಗಿ ಇರಿಸಲಾಗಿದೆ ಎಂದು ಯಶ್ ಪಾಲ್ ಸುವರ್ಣ ಸ್ಪಷ್ಟನೆ ನೀಡಿದ್ದಾರೆ.
Advertisement