ಹಾಸನ ಜಿಲ್ಲೆಯ ಹೊಳೆನರಸೀಪುರದ ಸರ್ಕಾರಿ ನರ್ಸಿಂಗ್ ಕಾಲೇಜಿನ ಸುಮಾರು 25 ಕಾಶ್ಮೀರಿ ವಿದ್ಯಾರ್ಥಿಗಳು ತಮ್ಮ ವೇಷಭೂಷಣಕ್ಕೆ ಸಂಬಂಧಿಸಿದಂತೆ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ಸಂಘ (JKSA) ಆರೋಪಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಸಂಘ ಪ್ರಧಾನ ಮಂತ್ರಿಗಳ ವಿಶೇಷ ವಿದ್ಯಾರ್ಥಿವೇತನ ಯೋಜನೆ (PMSSS) ಅಡಿಯಲ್ಲಿ ದಾಖಲಾದ ಈ ವಿದ್ಯಾರ್ಥಿಗಳಿಗೆ ತಮ್ಮ ಗಡ್ಡವನ್ನು ಟ್ರಿಮ್ ಮಾಡುವಂತೆ ಕಾಲೇಜು ಆಡಳಿತ ಒತ್ತಾಯಿಸುತ್ತಿದೆ ಎಂದು ಆರೋಪಿಸಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರಿ ನರ್ಸಿಂಗ್ ಕಾಲೇಜಿನ ಡೀನ್ ಮತ್ತು ನಿರ್ದೇಶಕರಿಗೆ ನೊಟೀಸ್ ಜಾರಿಗೊಳಿಸಲಾಗಿದೆ.
ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ವಿದ್ಯಾರ್ಥಿಗಳು ಸ್ವಚ್ಛತೆ ಮತ್ತು ನೈರ್ಮಲ್ಯದಿಂದ ಬರಲು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೂಚಿಸಿದೆ, ಕಾಶ್ಮೀರ ವಿದ್ಯಾರ್ಥಿಗಳು ತರಗತಿಗಳಿಗೆ ನಿಯಮಿತವಾಗಿ ಹಾಜರಾಗುತ್ತಿಲ್ಲ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಸಚಿವರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದು, ಈ ಘಟನೆ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡಿದೆ. ಚುನಾಯಿತ ಪ್ರತಿನಿಧಿಯೊಬ್ಬರು ಆಯೋಜಿಸಿದ್ದ ಮಗಳ ನಿಶ್ಚಿತಾರ್ಥ ಸಮಾರಂಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸಚಿವರು ಕಾಂಗ್ರೆಸ್ ಮುಖಂಡನ ಎದುರಿಗೆ ಬಂದು ಹಗುರವಾದ ಧಾಟಿಯಲ್ಲಿ ಮಾತನಾಡಿದ್ದರಿಂದ ಕಾಂಗ್ರೆಸ್ ಮುಖಂಡ ಸಚಿವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗುತ್ತಿದೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು, ಇಬ್ಬರ ನಡುವೆ ವರ್ಗಾವಣೆ ದಂಧೆ ಹಣ ಹಂಚಿಕೆ ವಿಚಾರದಲ್ಲಿ ಗಲಾಟೆಯಾಗಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ವಕ್ಫ್ ಆಸ್ತಿ ವಿವಾದ ಭುಗಿಲೆದ್ದ ಬೆನ್ನಲ್ಲೇ ರೈತರಿಗೆ ಮತ್ತು ಇತರರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್ ಪಡೆಯುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದು ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಿದೆ.
ಹಲವಾರು ರೈತರು ಮತ್ತು ಇತರ ಜನರು ತಮ್ಮ ಆಸ್ತಿಗಳನ್ನು ವಕ್ಫ್ ಮಂಡಳಿ ಹೆಸರಿಗೆ ದಾಖಲೆ ಮಾಡಲಾಗಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ರೈತರಿಗೆ ನೀಡಿರುವ ಪರಿವರ್ತನೆ ಪ್ರಕ್ರಿಯೆ ಮತ್ತು ನೊಟೀಸ್ ಗಳನ್ನು ಹಿಂಪಡೆಯಲು ಸಿಎಂ ಸೂಚಿಸಿದ್ದಾರೆ. ರೈತರ ಸ್ವಾಧೀನದಲ್ಲಿರುವ ಜಮೀನುಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಕಾನೂನು ಬಾಹಿರವಾಗಿ ಹಾಗೂ ನೋಟಿಸ್ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜಮೀನನ್ನು ವಕ್ಫ್ ಆಸ್ತಿಯನ್ನಾಗಿ ನಮೂದು ಮಾಡಿದ್ದರ ಪರಿಣಾಮ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿರುವ ಹಾನಗಲ್ ತಾಲೂಕಿನ ಹರನಗಿರಿ ಗ್ರಾಮದ ರೈತ ಚನ್ನಪ್ಪ ಬಾಳಿಕಾಯಿ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆ 2024 ರ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಮೃತನ ಕುಟುಂಬವನ್ನು ಭೇಟಿ ಮಾಡಿದ್ದು, ಪಾಲ್ ಅವರ ಈ ನಡೆ ವಿವಾದಕ್ಕೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿತ್ತು. ಈಗ ಬಿಜೆಪಿ ನಿಯೋಗ ರೈತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಭಾನುವಾರ ಬ್ರಹ್ಮಾವರದಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಮೃತ ಬಿಜು ಮೋಹನ್ ಕೇರಳ ಮೂಲದವರಾಗಿದ್ದು, ಕೂಲಿ ಕೆಲಸಕ್ಕೆಂದು ಉಡುಪಿಗೆ ವಲಸೆ ಬಂದಿದ್ದರು. ಮೂಲಗಳ ಪ್ರಕಾರ, ಬ್ರಹ್ಮಾವರದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಬಿಜು ಅವರನ್ನು ಬಂಧಿಸಲಾಗಿತ್ತು. ಇದು ಲಾಕಪ್ ಡೆತ್ ಪ್ರಕರಣವಾಗಿರುವುದರಿಂದ ಕಾನೂನು ಪ್ರಕಾರ ಸಿಐಡಿ ತನಿಖೆ ನಡೆಸಲಿದೆ. ಎರಡು ವೈದ್ಯಕೀಯ ತಂಡಗಳಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಮತ್ತು ವಿಚಾರಣೆಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನೋಡಿಕೊಳ್ಳುತ್ತಾರೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ.
Advertisement