ಮಂಡ್ಯ: ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಭಾನುವಾರ ದಲಿತರಿಗೆ ಪ್ರಥಮ ಬಾರಿಗೆ ದೇಗುಲ ಪ್ರವೇಶಿಸಿ ‘ಕಾಲಭೈರವೇಶ್ವರ’ ಪೂಜೆಗೆ ಜಿಲ್ಲಾಧಿಕಾರಿ ದಾರಿ ಮಾಡಿಕೊಟ್ಟಿದ್ದರಿಂದ ಭಾನುವಾರ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.
ಹನಕೆರೆ ಗ್ರಾಮದ ದೇವಾಲಯಕ್ಕೆ ರವಿವಾರ ದಲಿತರಿಗೆ ಮುಕ್ತ ಪ್ರವೇಶ ಹಾಗೂ ಪೂಜೆಗೆ ಅವಕಾಶ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಸವರ್ಣೀಯರು ಬಹುತೇಕ ಒಕ್ಕಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ದೇವಾಲಯದ ಒಳಗಿದ್ದ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಬೇರೊಂದು ದೇವಾಲಯದಲ್ಲಿ ಇಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಹನಕೆರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮೂಲಗಳ ಪ್ರಕಾರ, ಗ್ರಾಮದಲ್ಲಿ ಪುರಾತನ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನವಿದ್ದು, ದಲಿತರಿಗೆ ಅದರೊಳಗೆ ಪ್ರವೇಶಿಸಲು ಅವಕಾಶವಿರಲಿಲ್ಲ. ಸುಮಾರು ಮೂರು ವರ್ಷಗಳ ಹಿಂದೆ, ಹಳೆಯ ಶಿಥಿಲಗೊಂಡ ಕಟ್ಟಡವನ್ನು ಕೆಡವಿ ಹೊಸ ದೇವಾಲಯವನ್ನು ನಿರ್ಮಿಸಲಾಯಿತು. ಇತ್ತೀಚೆಗೆ ಈ ದೇವಾಲಯ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಬಂದಿತ್ತು.
ಇದಾಗಿ ಕೆಲವು ತಿಂಗಳ ನಂತರ ದಲಿತರು ದೇವಾಲಯ ಪ್ರವೇಶಿಸಲು ನಿರ್ಧರಿಸಿದ್ದಾರೆ. ಆದರೆ ಗ್ರಾಮದ ಕೆಲವು ಸವರ್ಣೀಯರು ಇದಕ್ಕೆ ಒಪ್ಪಿಲ್ಲ. ಬಳಿಕ ದಲಿತರ ತಾರತಮ್ಯದ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ನಂತರ ಎರಡು ಬಾರಿ ಶಾಂತಿ ಸಭೆ ನಡೆಸಿದರೂ ವಿಫಲವಾಗಿದೆ ಎನ್ನಲಾಗಿದೆ.
ಭಾನುವಾರ ಪೊಲೀಸ್ ಭದ್ರತೆಯ ನಡುವೆ ದಲಿತರು ದೇವಸ್ಥಾನ ಪ್ರವೇಶಿಸಿದ್ದರು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಮೇಲ್ವರ್ಗದವರು ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಅವರು ದೇವಸ್ಥಾನವನ್ನು ಉಳಿಸಿಕೊಳ್ಳಲಿ, ನಾವು ನಮ್ಮೊಂದಿಗೆ ದೇವರನ್ನು ಕರೆದುಕೊಂಡು ಹೋಗುತ್ತೇವೆ" ಎಂದು ಅವರಲ್ಲಿ ಒಬ್ಬರು ಹೇಳಿದ್ದಾಗಿ ತಿಳಿದುಬಂದಿದೆ.
Advertisement