ಜಿದ್ದಾ ಜಿದ್ದಿನ ಅಖಾಡವಾಗಿ ಮಾರ್ಪಟ್ಟಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬಿದ್ದಿದೆ. ನಾಳೆ ಮನೆ ಮನೆ ಪ್ರಚಾರಕ್ಕೆ ಅವಕಾಶವಿದೆ. ಬುಧವಾರ ಮೂರು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಎನ್‌ಡಿಎ ಬೃಹತ್ ರ್ಯಾಲಿಗಳನ್ನು ನಡೆಸುವ ಮೂಲಕ ಉಪಚುನಾವಣೆ ಪ್ರಚಾರವನ್ನು ಅಂತ್ಯಗೊಳಿಸಿವೆ. ಕಾಂಗ್ರೆಸ್ ಪಕ್ಷದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಭಾಗವಹಿಸಲಿದ್ದರು. ಎನ್‌ಡಿಎ ರ್ಯಾ ಲಿಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಭಾಗವಹಿಸಿದ್ದರು. ಈಮಧ್ಯೆ, ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಅವರು ಚುನಾವಣಾ ಪ್ರಚಾರ ವೇಳೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ‘ಕಾಲಿಯ’ ಎಂದು ಕರೆಯುವ ಮೂಲಕ ವರ್ಣಬೇಧದ ಹೇಳಿಕೆ ನೀಡಿದ್ದಾರೆ. ಜಮೀರ್ ಅಹಮದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಮನಗರ ಪೊಲೀಸರಿಗೆ ಜೆಡಿಎಸ್ ಒತ್ತಾಯಿಸಿದ್ದು, ಅವರನ್ನು ಸಂಪುಟದಿಂದ ಕೈಬಿಡುವಂತೆ ಕಾಂಗ್ರೆಸ್ ನಾಯಕತ್ವಕ್ಕೆ ಒತ್ತಾಯಿಸಿದೆ.
ಕೋವಿಡ್ ಭ್ರಷ್ಟಾಚಾರಗಳ ಕುರಿತು ಮೈಕಲ್ ಕುನ್ಹಾ ಅವರ ಆಯೋಗದ ವರದಿಯಲ್ಲಿ ಮಾಜಿ ಸಿಎಂ ಬಿಎಸ್ ವೈ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸ್ಸು ಮಾಡಿರುವ ಬೆನ್ನಲ್ಲೇ ಜಸ್ಟೀಸ್ ಕುನ್ಹಾ ಅವರನ್ನ ಕಾಂಗ್ರೆಸ್ ಏಜೇಂಟ್ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕರೆದಿದ್ದು ಈ ಹೇಳಿಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಸರ್ಕಾರದ ಮುಖ್ಯ ವಕ್ತಾರ ದಿನೇಶ್ ಗುಂಡೂರಾವ್ ಹಾಗೂ ಸಚಿವ ಕೃಷ್ಣಬೈರೇಗೌಡ ಅವರು ಇಂದು ರಾಜ್ಯಪಾಲರಿಗೆ ದೂರು ನೀಡಿದರು. ನಂತರ ಮಾತನಾಡಿದ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಿವೃತ್ತ ನ್ಯಾಯಧೀಶ ಜಸ್ಟೀಸ್ ಕುನ್ಹಾ ಅವರು ಅತ್ಯಂತ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದವರು. ಗೌರವಾನ್ವಿತರ ಬಗ್ಗೆ ಪ್ರಲ್ಹಾದ್ ಜೋಶಿ ವೈಯಕ್ತಿಕ ನಿಂದನೆ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಇಂತಹ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಜೋಶಿ ಕ್ಷಮೆ ಕೇಳಬೇಕು ಎಂದು ಆಗ್ರಹಿದರು.
ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತನಗೆ ಜಾಮೀನು ನೀಡಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಮಕ್ಕಳ ಕೈಯಲ್ಲಿ ಪೆನ್ನು ನೀಡುವ ಬದಲು ತಲ್ವಾರು ಕೊಡಿ ಎಂದು ಮಾಶಾಳದ ಆಳಂದ ಮಠದ ಮರುಳಾರಾಧ್ಯ ಶಿವಾಚಾರ್ಯರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಅಲ್ಲದೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 299 ಹಾಗೂ 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಕ್ಫ್ ಹಠಾವೋ ದೇಶ್ ಬಚಾವೋ ಹೋರಾಟದಲ್ಲಿ ಪಾಲ್ಗೊಂಡು ಶ್ರೀಗಳು ಈ ಹೇಳಿಕೆ ನೀಡಿದ್ದರು.
ಬೆಂಗಳೂರಿನ ಸಿಂಗಸಂದ್ರದ SRS ಟ್ರಾವೆಲ್ಸ್ ನ ವರ್ಕ್ ಶಾಪ್ ವಾಹನ ನಿಲುಗಡೆ ಶೆಡ್ ನಲ್ಲಿ ಇಬ್ಬರು ಕ್ಲಿನರ್ ಗಳನ್ನು ಜೋಡಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸುರೇಶ್ ಎಂಬಾತನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಸುರೇಶ್ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಶಿಕ್ಷೆ ಅನುಭವಿಸಿದ್ದು, ಈತನಿಗೆ ಶ್ಯೂರಿಟಿ ಹಣ ನೀಡಿ ಹೊರಕ್ಕೆ ಕರೆತರಲು ಯಾರೂ ಇರಲಿಲ್ಲ. ಈ ಸಮಯದಲ್ಲಿ ಕೆಲ ಅಪರಾಧಿಗಳಿಗೆ ತಲಾ ಮೂರು ಲಕ್ಷದಂತೆ ನಟ ದುನಿಯಾ ವಿಜಯ್ ಶ್ಯೂರಿಟಿ ಹಣ ಕೊಟ್ಟಿದ್ದರು. ಜೈಲಿನಿಂದ ಹೊರಬಂದಿದ್ದ ಸುರೇಶ್ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದನು. ಕುಡಿದ ಮತ್ತಿನಲ್ಲಿ ನಾಗೇಶ್ ಮತ್ತು ಮಂಜುನಾಥ್ ನೀನೊಬ್ಬ ಕಳ್ಳ, ನಿನ್ನ ಮೇಲೆ ಪ್ರಕರಣಗಳಿವೆ ಎಂದು ಸುರೇಶ್ ನನ್ನು ಹೀಯಾಳಿಸುತ್ತಿದ್ದರು. ಇದರಿಂದ ಕೋಪಗೊಂಡು ಇಬ್ಬರನ್ನು ಕೊಲೆ ಮಾಡಿದ್ದಾಗಿ ಡಿಸಿಪಿ ಸಜೀತ್ ತಿಳಿಸಿದ್ದಾರೆ.
Advertisement