
ಹುಮನಾಬಾದ್: ಬೆಳಗಿನ ಉಪಹಾರ ಸೇವಿಸಿದ 50ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿ ಬುಧವಾರ ನಡೆದಿದೆ.
ಬಸವತೀರ್ಥ ವಿದ್ಯಾಪೀಠ ಗುರುಕುಲ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿಷ ಪೂರಿತ ಆಹಾರ ಸೇವನೆಯಿಂದ ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಒಗ್ಗರಣೆ ಅನ್ನ ಉಪಹಾರ ಸೇವಿಸಿದ ಬಳಿಕ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ. ಅಲ್ಲದೇ ಸುಸ್ತು, ತಲೆ ಸುತ್ತಿನಿಂದ ಬಳಲಿದ್ದರು. ಕೂಡಲೇ ವಸತಿ ನಿಲಯದ ಸಿಬ್ಬಂದಿ, ಸ್ಥಳೀಯರು ಮಕ್ಕಳನ್ನು ಹುಮಾನಾಬಾದ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ವೈದ್ಯಕೀಯ ವರದಿ ಪ್ರಕಾರ 12 ರಿಂದ 14 ವರ್ಷದ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಸ್ಥಳಕ್ಕೆ ವಿಧಾನಪರಿಷತ್ ಸದಸ್ಯರಾದ ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
Advertisement