ಬೆಂಗಳೂರು: 2024 ರ ಲೋಕಸಭೆ ಚುನಾವಣೆ ವೇಳ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಈ ಬಾರಿಯೂ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದೇ ವಧುವರರಿಗೆ ನೀಡುವ ಉಡುಗೊರೆ ಎಂದು ಮುದ್ರಿಸಿದ್ದರು. ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಚುನಾವಣಾ ಸಮಯದಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಶಿವಪ್ರಸಾದ್ ಮತ್ತು ಆಮಂತ್ರಣ ಪತ್ರಿಕೆಯ ಮುದ್ರಕ ಬಾಲಕೃಷ್ಣ ಎ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಮಧ್ಯಂತರ ತಡೆಯಾಜ್ಞೆ ನೀಡಿದರು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ದಾಖಲಿಸಿರುವ ಪ್ರಕರಣ ಪ್ರಶ್ನಿಸಿ ಆರೋಪಿಗಳು ಅರ್ಜಿ ಸಲ್ಲಿಸಿದ್ದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಉಪ್ಪಿನಂಗಡಿ ಪೊಲೀಸರು ಮತ್ತು ಫ್ಲೈಯಿಂಗ್ ಸ್ಕ್ವಾಡ್‌ಗೆ ನೋಟಿಸ್ ಜಾರಿಗೊಳಿಸಿದೆ. ಚುನಾವಣೆ ನೀತಿಸಂಹಿತೆ ಜಾರಿಯಾಗುವ ಮುನ್ನ ಆಮಂತ್ರಣ ಪತ್ರ ಮುದ್ರಿಸಿ, ವಿತರಿಸಲಾಗಿದ್ದು ಇದು ನೀತಿಸಂಹಿತೆಯ ಉಲ್ಲಂಘನೆಯಾಗಿಲ್ಲ. ಪ್ರಧಾನಿ ಮೇಲಿನ ಪ್ರೀತಿ ಹಾಗೂ ರಾಷ್ಟ್ರದ ಮೇಲಿನ ಕಾಳಜಿಯಿಂದ ಇದನ್ನು ಉಲ್ಲೇಖಿಸಲಾಗಿದೆಯೇ ವಿನಃ ಕಾನೂನನ್ನು ಉಲ್ಲಂಘಿಸುವ ಬೇರಾವುದೇ ಉದ್ದೇಶ ಹೊಂದಿಲ್ಲ. ಈ ಕಾರಣಕ್ಕೆ ಇದನ್ನು ಅಪರಾಧವೆಂದು ಪರಿಗಣಿಸಬಾರದು ಹಾಗೂ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದೆಂದು ಲಿಖಿತ ಹೇಳಿಕೆ ನೀಡಿದ್ದರು.
1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 127ಎ (ಕರಪತ್ರಗಳು, ಪೋಸ್ಟರ್‌ಗಳ ಮುದ್ರಣದ ಮೇಲಿನ ನಿರ್ಬಂಧ) ಅಡಿಯಲ್ಲಿ ಅಪರಾಧ ಎಂದು ಹೇಳಲಾದ ಪೋಸ್ಟ್‌ಸ್ಕ್ರಿಪ್ಟ್‌ನೊಂದಿಗೆ ಶಿವಪ್ರಸಾದ್ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಮುಂದಿನ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ನಿಗದಿ ಪಡಿಸಲಾಗಿದ್ದು, ಅಲ್ಲಿಯವರೆಗೆ ಪ್ರಕರಣದ ಎಲ್ಲಾ ಮುಂದಿನ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
Advertisement