ಬೆಂಗಳೂರು: ಭ್ರಷ್ಟಾಚಾರದಲ್ಲಿ "ಸಿದ್ಧ" ಹಸ್ತರಾದ ಸಿಎಂ ಸಿದ್ದರಾಮಯ್ಯನವರು ಅಹಿಂದ ವೇಷತೊಟ್ಟು ರಾಜ್ಯದ ಜನರಿಗೆ ವಂಚಿಸುತ್ತಲೇ ಇದ್ದಾರೆ ಎಂದು ಜಾತ್ಯತೀತ ಜನತಾದಳ ಮುಖ್ಯಮಂತ್ರಿಗಳ ಕಚೇರಿಯ ವಿಡಿಯೊ ಬಿಡುಗಡೆ ಮಾಡಿ ಆರೋಪಿಸಿದೆ.
ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲು ಕೈಲಾಗದ ಸಿಎಂ ಸಿದ್ದರಾಮಯ್ಯ, ವಿಧಾನಸೌಧದಲ್ಲಿರುವ ಅವರ 323ನೇ ಕೊಠಡಿ ನವೀಕರಣಕ್ಕೆ ಕೋಟಿ ಕೋಟಿ ದುಂದು ವೆಚ್ಚ ಮಾಡಿದ್ದಾರೆ. ಸರಳತೆ, ಸಮಾಜವಾದ ಎನ್ನುತ್ತಲೇ ಐಷಾರಾಮಿ ಜೀವನ ನಡೆಸುವುದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಕರಗತವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ದುಂದುವೆಚ್ಚ ಅಗತ್ಯವೇನಿದೆ?: ಸಮಾಜವಾದಿ, ಸರಳ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯನವರು 2.5 ಕೋಟಿಗೂ ಹೆಚ್ಚು ದುಂದುವೆಚ್ಚ ಮಾಡಿ ಮುಖ್ಯಮಂತ್ರಿ ಕಚೇರಿಯನ್ನು ಕಾರ್ಪೊರೇಟ್ ಶೈಲಿಯಲ್ಲಿ ನವೀಕರಿಸಿ, ಕಾರ್ಪೊರೇಟ್ ಸಿಎಂ ಆಗಿ ಬದಲಾಗಿದ್ದಾರೆ.
ಸಮಾಜವಾದಿ ಎಂದು ಬಿಂಬಿಸಿಕೊಂಡು ಜನರ ತೆರಿಗೆ ಹಣದಲ್ಲಿ ಇಷ್ಟೊಂದು ಐಷಾರಾಮಿ ನವೀಕರಣ ಮಾಡುವ ಅಗತ್ಯವೇನಿದೆ, ಇದಕ್ಕೆ ನಿಮ್ಮ ಆತ್ಮಸಾಕ್ಷಿ ಏನು ಹೇಳುತ್ತದೆ ಎಂದು ಕೇಳಿದ್ದಾರೆ.
Advertisement