ಬೆಂಗಳೂರು: ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲೂಕಿನ ನುಗು ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ತಮ್ಮ ಖಾಸಗಿ ಜಮೀನಿಗೆ ಮಣ್ಣಿನ ರಸ್ತೆ ಮೂಲಕ ಪ್ರವೇಶ ಕಲ್ಪಿಸಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಇಂಧನ ಸಚಿವ ಕೆಜೆ ಜಾರ್ಜ್ ಪುತ್ರ ರಾಣಾ ಜಾರ್ಜ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ರಸ್ತೆ ಬಳಕೆ ಮಾಡುವುದಕ್ಕೆ ಸಾರ್ವಜನಿಕರು ಆಕ್ಷೇಪಿಸಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಅದನ್ನು ಆಧರಿಸಿ ಮುಕ್ತ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದ್ದರಿಂದ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ 2024ರ ಮಾ. 1ರಂದು ಹೊರಡಿಸಿರುವ ಷರತ್ತುಬದ್ಧ ಸಂಚಾರದ ನಿರ್ಬಂಧಿತ ಆದೇಶವನ್ನು ರದ್ದುಪಡಿಸಬೇಕು. ದಿನದ 24 ಗಂಟೆಯೂ ಜಮೀನುಗಳಿಗೆ ಸಂಚರಿಸಲು ಅನುಮತಿ ನೀಡುವಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು. ರಾಣಾ ಜಾರ್ಜ್ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತು. ಕೆಲ ಕಾಲ ವಾದ ಆಲಿಸಿದ ನ್ಯಾಯಾಲಯ, ಪ್ರಕರಣದ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ನಂಜನಗೂಡು ತಾಲೂಕಿನ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿತು.
ಮುಂಜಾನೆ 6 ರಿಂದ ಸಂಜೆ 6 ಗಂಟೆಯವರೆಗೆ ಮತ್ತು ನಂತರದ ವೇಳೆಯಲ್ಲಿ ತುರ್ತು ಸಂದರ್ಭಗಳಲ್ಲಿ ಮಾತ್ರ ವ್ಯಾಪ್ತಿಯ ಅರಣ್ಯಾಧಿಕಾರಿಗಳ ಪೂರ್ವಾನುಮತಿಯೊಂದಿಗೆ ಮಣ್ಣಿನ ರಸ್ತೆಯನ್ನು ಬಳಸಲು ಅವರಿಗೆ ಅನುಮತಿ ನೀಡಲಾಯಿತು. ಅಭಯಾರಣ್ಯದ ವ್ಯಾಪ್ತಿಯಲ್ಲಿ ಜಮೀನು ಹೊಂದಿರುವವರಿಗೆ ಸಂಚರಿಸಲು ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಕಲಂ 27(1) (ಸಿ) ಅಡಿ ವಿನಾಯಿತಿ ಇದೆ. ಆದರೆ, ಈ ಪ್ರಕರಣದಲ್ಲಿ ಅರಣ್ಯ ಇಲಾಖೆ ಅರ್ಜಿದಾರರ ವಿರುದ್ಧ ಕಾನೂನುಬಾಹಿರ ಆದೇಶ ಹೊರಡಿಸಿದೆ. ಇದು ಸಂವಿಧಾನದ 19 (1) (ಡಿ) ವಿಧಿಗೆ ವ್ಯತಿರಿಕ್ತವಾಗಿದ್ದು, ಮುಕ್ತಸಂಚಾರಕ್ಕೆ ಅಡ್ಡಿ ಮಾಡಿರುವ ಅರಣ್ಯ ಇಲಾಖೆಯ ಈ ನಿರ್ಬಂಧವನ್ನು ರದ್ದುಗೊಳಿಸಬೇಕು'' ಎಂದು ಕೋರಿದರು.
ಎಚ್.ಡಿ.ಕೋಟೆ ತಾಲೂಕಿನ ಲಕ್ಕಸೋಗೆ ಹಾಗೂ ಶಂಭು ಗೌಡನಪಾಳ್ಯ ಗ್ರಾಮಗಳಲ್ಲಿ ನುಗು ವನ್ಯಜೀವಿಧಾಮದ ಸರಹದ್ದಿನಲ್ಲಿ ರಾಣಾ ಜಮೀನು ಹೊಂದಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅರಣ್ಯ ಇಲಾಖೆಗೆ ಒಳಪಡುವ ಮಣ್ಣಿನ ರಸ್ತೆ ಮಾತ್ರ ಆಸ್ತಿಗೆ ಶಾಶ್ವತ ಪ್ರವೇಶವಾಗಿದೆ. ಅವರ ಆಸ್ತಿಗೆ ಮತ್ತೊಂದು ಮಾರ್ಗವಿದೆ, ಆದರೆ ಮಳೆಗಾಲದಲ್ಲಿ ಅಥವಾ ನುಗು ಜಲಾಶಯದಲ್ಲಿ ನೀರಿನ ಮಟ್ಟವು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಾದಾಗ ಅದನ್ನು ಪ್ರವೇಶಿಸಲಾಗುವುದಿಲ್ಲ.
Advertisement