ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯ ಗೃಹ ಇಲಾಖೆ ಅನುಮತಿ ನೀಡಿದೆ. ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಆರೋಪಿ ನಟೇಶ್ ಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸರ್ಕಾರಿ ಅಧಿಕಾರಿ ವಿಚಾರಣೆ ನಡೆಸಲು ಸರ್ಕಾರದ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ 17(A) ಅಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಒಂದು ತಿಂಗಳ ಹಿಂದೆ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದ್ದರು. ನಟೇಶ್ ಈಗಾಗಲೇ ಇಡಿ ಅಧಿಕಾರಿಗಳ ಮುಂದೆ ಮೂರು ಬಾರಿ ವಿಚಾರಣೆ ಹಾಜರಾಗಿದ್ದರು.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಕರಿಯಾ ಎಂದು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಕರೆದಿರುವುದು ರಾಜ್ಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರೇ ಜಮೀರ್ ಅವರನ್ನು ಬಹಿರಂಗವಾಗಿ ಟೀಕಿಸಿದ್ದು ಇದೀಗ ಕಾಂಗ್ರೆಸ್ ರಾಜ್ಯಾಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಸಹ ಜಮೀರ್ ಅಹ್ಮದ್ ಅವರ ಕರಿಯಾ ಹೇಳಿಕೆ ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ ಎಂದರು. ಮಹಾರಾಷ್ಟ್ರ ಚುನಾವಣಾ ಪ್ರಚೇರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆ ಹೇಳಿಕೆಯನ್ನು ಒಪ್ಪುವುದಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಜಮೀರ್ ಹೇಳಿಕೆಯನ್ನು ಖಂಡಿಸುತ್ತೇನೆ. ಜಮೀರ್ ವಿರುದ್ಧ ಕ್ರಮದ ಬಗ್ಗೆ ಮುಂದೆ ಯೋಚಿಸುತ್ತೇವೆ ಎಂದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೊಟೀಸ್ ನೀಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ಬಳಿ ಇರುವ ಜಮೀರ್ ಮನೆಗೆ ಬಂದು ಲೋಕಾಯುಕ್ತ ಇನ್‌ಪೆಕ್ಟರ್ ಸಚಿವರಿಗೆ ನೊಟೀಸ್ ನೀಡಿದ್ದು, ಸೂಕ್ತ ದಾಖಲೆಗಳೊಂದಿಗೆ ಡಿಸೆಂಬರ್ 3ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಮೂರು ವರ್ಷಗಳ ಹಿಂದೆ ಜಮೀರ್ ವಿರುದ್ಧ ಎಸಿಬಿಯಲ್ಲಿ ಜಾರಿ ನಿರ್ದೇಶನಾಲಯದ ವರದಿ ಆಧರಿಸಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಾಗಿತ್ತು. ತರುವಾಯ ಎಸಿಬಿ ರದ್ದುಗೊಂಡ ನಂತರ ಆ ಪ್ರಕರಣದ ಮುಂದುವರೆದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಕೈಗೆತ್ತಿಕೊಂಡಿದ್ದರು. ಪೊಲೀಸರು ಈಗಾಗಲೆ ಪ್ರಾಥಮಿಕ ಹಂತದ ತನಿಖೆ ಮುಗಿಸಿದ್ದಾರೆ.
ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ಹನಿಟ್ರ್ಯಾಪ್ ಪ್ರಕರಣದಲ್ಲಿ ಒಳಸಂಚು ರೂಪಿಸಿದ್ದ ಆರೋಪದಡಿ ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಐಯಣ್ಣ ರೆಡ್ಡಿ ಅವರನ್ನು ಸಿಐಡಿಯ ವಿಶೇಷ ತನಿಖಾ ದಳದ ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಐಯಣ್ಣ ರೆಡ್ಡಿ ಅವರನ್ನು ವಶಕ್ಕೆ ಪಡೆದ ಎಸ್‌ಐಟಿ ತನಿಖಾಧಿಕಾರಿಗಳು, ವಿಚಾರಣೆ ಬಳಿಕ ಬಂಧಿಸಿದ್ದಾರೆ. ಆರೋಪಿಗಳು ನಡೆಸುತ್ತಿದ್ದ ಹನಿಟ್ರ್ಯಾಪ್‌ಗೆ ಇನ್‌ಸ್ಪೆಕ್ಟರ್ ನೆರವು ನೀಡಿದ್ದು ಅಲ್ಲದೇ ಆರೋಪಿಗಳು ಕೆಲವು ರಾಜಕಾರಣಿಗಳಿಗೆ ಏಡ್ಸ್ ಚುಚ್ಚುಮದ್ದು ಪ್ರಯೋಗಿಸಲು ಸಂಚು ರೂಪಿಸಿದ್ದು ಗೊತ್ತಿದ್ದರೂ ಇನ್ಸ್‌ಪೆಕ್ಟರ್ ಮಾಹಿತಿ ಬಚ್ಚಿಟ್ಟಿದ್ದರೆಂಬ ಆರೋಪದಡಿ ಬಂಧಿಸಲಾಗಿದೆ.
ಮೊಬೈಲ್ ಕೊಡಿಸುವಂತೆ ಹಠ ಮಾಡಿದ್ದರಿಂದ ಕೋಪಗೊಂಡ ತಂದೆ ತನ್ನ ಮಗನನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಕುಮಾರಸ್ವಾಮಿ ಲೇಔಟ್ ಕಾಶಿ ನಗರದಲ್ಲಿ ಈ ಘಟನೆ ನಡೆದಿದ್ದು ಮೃತ ಬಾಲಕನನ್ನು ತೇಜಸ್ ಎಂದು ಗುರುತಿಸಲಾಗಿದೆ. ಮೊಬೈಲ್ ಬೇಕು ಎಂದು ತೇಜಸ್ ಹಠ ಮಾಡಿದ್ದು ಇದರಿಂದ ಕೋಪಗೊಂಡ ರವಿಕುಮಾರ್ ಸರಿಯಾಗಿ ಓದಲ್ಲ, ಶಾಲೆಗೆ ಹೊಗಲ್ಲ, ಮೊಬೈಲ್ ಬೇಕಾ ಅಂತ ಗಲಾಟೆ ಶುರು ಮಾಡಿದ್ದಾನೆ. ಕುಡಿದ ಅಮಲಿನಲ್ಲಿದ್ದ ರವಿಕುಮಾರ್ ಮಗನಿಗೆ ಥಳಿಸಿದ್ದಲ್ಲದೆ ಗೋಡೆಗೆ ತಳ್ಳಿದ್ದಾನೆ, ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ ನನ್ನು ಕೂಡಲೇ ಆಸ್ಪತ್ರಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ 6.50 ಕೋಟಿ ರೂಪಾಯಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಇತ್ತೀಚೆಗೆ ನಿರ್ಮಿಸಿದ್ದ ಮಾಂಜರಿ-ಬವನಸೌಂದತ್ತಿ ಸೇತುವೆ-ಕಮ್-ಬ್ಯಾರೇಜ್ ಕುಸಿದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ನದಿ ಪ್ರವಾಹ ತಡೆಯದೆ ಸೇತುವೆ ಕುಸಿದಿದೆ ಎಂದು ಆರೋಪಿಸಿದ್ದಾರೆ. ರಾಯಬಾಗ, ಚಿಂಚಲಿ, ಕುಡಚಿ, ದಿಗ್ಗೇವಾಡಿ ಮುಂತಾದ ಹಲವಾರು ಗಡಿ ಗ್ರಾಮಗಳಿಗೆ ಸಂಪರ್ಕ ಸುಧಾರಿಸುವ ಉದ್ದೇಶದಿಂದ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ಉದ್ಘಾಟನೆಗೊಂಡ ಮೂರು ತಿಂಗಳೊಳಗೆ ಸೇತುವೆ ಕುಸಿದಿದೆ.
Advertisement