ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ 100 ಕೋಟಿ ರೂ ಆಫರ್ ನೀಡಿದೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿಯವರು 50 ಕೋಟಿ ಅಲ್ಲ, 100 ಕೋಟಿ ಆಮಿಷ ಒಡ್ಡಿದ್ದಾರೆ. ಶಾಸಕರ ಭೇಟಿಯ ಆಡಿಯೋ, ವೀಡಿಯೋ ರೆಕಾರ್ಡ್ ನಮ್ಮ ಬಳಿ ಇದೆ. ಸಮಯ ನೋಡಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು. ಇದೀಗ ರವಿಕುಮಾರ್ ಗಣಿಗ ಆರೋಪವನ್ನು ಸ್ವತಃ ಕಾಂಗ್ರೆಸ್ ಶಾಸಕರೇ ತಳ್ಳಿಹಾಕಿದ್ದಾರೆ. ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್ ಹಾಗೂ ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ, ಬಿಜೆಪಿಯ ಯಾವೊಬ್ಬ ನಾಯಕರು ತಮ್ಮ ಬಳಿ ಬಂದು ಹಣದ ಆಮಿಷ ಒಡ್ಡಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯಲ್ಲಿರುವ ನನ್ನ ಸ್ನೇಹಿತರು ಸ್ನೇಹಕ್ಕಾಗಿ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದರು. ಆದರೆ ಎಂದಿಗೂ ಹಣದ ಆಮಿಷ ನೀಡಿಲ್ಲ ಎಂದು ಬಾಬಾಸಾಹೇಬ ಪಾಟೀಲ್ ಹೇಳಿದ್ದಾರೆ.
ಬಡತನ ರೇಖೆಗಿಂತ ಮೇಲಿರುವವರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಎಂಬ ಚರ್ಚೆ ನಡುವೆಯೇ, ಯಾವುದೇ ಕಾರ್ಡ್ ಗಳನ್ನು ರದ್ದು ಮಾಡುವುದಿಲ್ಲ. ಅನರ್ಹರ BPl ಕಾರ್ಡ್ ಗಳನ್ನು APLಗೆ ವರ್ಗಾಯಿಸಲಾಗುತ್ತದೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ಪಡಿತರ ಚೀಟಿ ವಿಚಾರವನ್ನು ಸಮ್ಮನೇ ರಾಜಕೀಯಗೊಳಿಸಲಾಗುತ್ತಿದೆ. ಸರ್ಕಾರ ಯಾವುದೇ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲ. ಅನರ್ಹ ಬಿಪಿಎಲ್ ಕಾರ್ಡುದಾರರನ್ನು ರದ್ದು ಮಾಡಿಲ್ಲ ಬದಲಾಗಿ ಎಪಿಎಲ್ ವರ್ಗಕ್ಕೆ ವರ್ಗಾಯಿಸಲಾಗಿದೆ ಎಂದು ಹೇಳಿದರು. ಸದ್ಯ ಜನಸಂಖ್ಯೆಯ ಸುಮಾರು 80 ಪ್ರತಿಶತ ಜನರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಆದಾಗ್ಯೂ, ಕೆಲವು ಅನರ್ಹ ವ್ಯಕ್ತಿಗಳು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಬಂದಿದೆ. ಅಂತಹ ಕಾರ್ಡ್‌ಗಳನ್ನು ಬದಲಾಯಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ಸರ್ಕಾರದ ಪ್ರಮುಖ ಐದು 'ಗ್ಯಾರಂಟಿ' ಯೋಜನೆಗಳ ಬಗ್ಗೆ ಸುಳ್ಳು ಜಾಹೀರಾತುಗಳನ್ನು ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮತ ಪಡೆಯುವ ಸಲುವಾಗಿ ಮಹಾರಾಷ್ಟ್ರದ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಸುಳ್ಳು ಜಾಹೀರಾತು ನೀಡುತ್ತಿದೆ. ಮಹಾಯುತಿ ಸರ್ಕಾರದ ವಿರುದ್ಧ ಕಾನೂನು ಕ್ರಮದ ಕುರಿತು ಪರಿಶೀಲಿಸಲಾಗುತ್ತಿದೆ ಎಂದರು. ನಮ್ಮ ಸರ್ಕಾರವು ಖಾತರಿ ಯೋಜನೆಗಳಿಗಾಗಿ ವರ್ಷಕ್ಕೆ 56,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಬಿಜೆಪಿಗರು ನಮ್ಮ ಬಳಿ ಹಣವಿಲ್ಲ ಎಂದು ಹೇಳುತ್ತಾರೆ. ಆದರೆ ಬಿಜೆಪಿ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲಿ ಇಂತಹ ಯೋಜನೆಗಳನ್ನು ಏಕೆ ಜಾರಿಗೆ ತರುತ್ತಿಲ್ಲ ಎಂದು ಪ್ರಶ್ನಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಕಂಬಾಳು ಗೊಲ್ಲರಹಟ್ಟಿಯ ಬಳಿ ಚಿರತೆ ದಾಳಿಯಲ್ಲಿ ಕರಿಯಮ್ಮ ಎಂಬುವರು ಸಾವನ್ನಪ್ಪಿದ್ದಾರೆ. ಇದರಿಂದ ಗೊಲ್ಲರಹಟ್ಟಿ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದು, ಮನೆಯಿಂದ ಆಚೆ ಹೋಗಲು ಹೆದರುತ್ತಿದ್ದಾರೆ. ಚಿರತೆ ದಾಳಿ ಆತಂಕ ಹಿನ್ನೆಲೆಯಲ್ಲಿ ACF, DCF ಸೇರಿದಂತೆ ಲೆಪರ್ಡ್ ಟಾಸ್ಕ್ ಫೋರ್ಸ್ ತಂಡ ಚಿರತೆ ಸಿದ್ದತೆ ನಡೆಸಿದೆ. ಈಗಾಗಲೇ ಗೊಲ್ಲರಹಟ್ಟಿಗೆ ಎಸಿಎಫ್ ನಿಜಾಮುದ್ದೀನ್ ಭೇಟಿ ನೀಡಿದ್ದು, ಚಿರತೆಯನ್ನು ಸೆರೆಹಿಡಿಯದೆ ಬಿಡುವುದಿಲ್ಲ ಎಂದು ಹೇಳಿದರು. ಇನ್ನು ಮೃತ ಕರಿಯಮ್ಮ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ನಿಜಾಮುದ್ದೀನ್ ಹೇಳಿದರು.
ಬೆಳಗಾವಿಯ ಯಮಕನಮರಡಿ ಸಮೀಪದ ಬೆನಕನಹೊಳಿ ಬಳಿ ಘಟಪ್ರಭಾ ನದಿ ಹಿನ್ನೀರಿನ ಪ್ರದೇಶದಲ್ಲಿ ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ. ಮೃತರನ್ನು ಬೆನಕನಹೊಳಿಯ ಲಕ್ಷ್ಮಣ ರಾಮ ಅಂಬಲಿ, ರಮೇಶ, ಯಲ್ಲಪ್ಪ ಎಂದು ಗುರುತಿಸಲಾಗಿದೆ. ಮೀನು ಹಿಡಿಯಲು ಹೋಗಿದ್ದವರು ಮನೆಗೆ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮತ್ತೊಂದೆಡೆ ಬೆಂಗಳೂರಿನ ಗೆದ್ದಲಹಳ್ಳಿಯಲ್ಲಿನ ಅಪಾರ್ಟ್ ಮೆಂಟ್ ಒಂದರ 7ನೇ ಅಂತಸ್ತಿನಿಂದ ಕೆಳಗೆ ಹಾರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿಯನ್ನು ಆದಿವ್ ಎಂದು ಗುರುತಿಸಲಾಗಿದ್ದು, ಖಾಸಗಿ ಪದವಿಪೂರ್ವ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ಪೂರ್ವ ವ್ಯಾಸಂಗ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
Advertisement