ಬೆಂಗಳೂರು: 2019ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಡಿಪ್ಲೊಮಾ ವಿದ್ಯಾರ್ಥಿಯ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ರೂ. 1,53,000 ದಿಂದ ರೂ. 21,28,000ಕ್ಕೆ ಹೆಚ್ಚಿಸಿ ಹೈಕೋರ್ಟ್ ಆದೇಶಿಸಿದೆ.
ಈ ಹಿಂದೆ ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್ ರೂ. 1,53,000 ಪರಿಹಾರವನ್ನು ಘೋಷಿಸಿತ್ತು. ಪರಿಷ್ಕೃತ ಪರಿಹಾರವನ್ನು ವಿಮಾ ಕಂಪನಿ ಪಾವತಿಸಬೇಕು. ನಂತರ ವಾಹನ ಮಾಲೀಕರಿಂದ ಆ ಮೊತ್ತವನ್ನು ಮರುಪಡೆಯಬಹುದಾಗಿದೆ. ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ವಿಜಯಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಇದು ಏಪ್ರಿಲ್ 23, 2019 ರಂದು ಸಂಭವಿಸಿದ್ದ 19 ವರ್ಷದ ಎಂ. ಎಸ್. ಶ್ರೀಹರಿ ಸಾವಿಗೆ ಸಂಬಂಧಿಸಿದ ಪ್ರಕರಣವಾಗಿದೆ. ಅಂದು ಸ್ನೇಹಿತ ಅರವಿಂದ್ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೆಂಗಳೂರು ಸಮೀಪದ ಹೆಜ್ಜಾಲ-ಕೆಂಪದ್ಯಾಪನಹಳ್ಳಿ ಬಳಿ ವೇಗದ ಚಾಲನೆಯಿಂದ ಬೈಕ್ ನಿಯಂತ್ರಣ ತಪ್ಪಿದ್ದರಿಂದ ಮಲ್ಲತ್ತಹಳ್ಳಿ ಗ್ರಾಮದ ಬಳಿ ಮಣ್ಣಿನ ಗೋಡೆಗೆ ಬೈಕ್ ಡಿಕ್ಕಿ ಹೊಡೆದಿದ್ದು, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಯುವಕ ಪಿಇಎಸ್ ಕಾಲೇಜಿನಲ್ಲಿ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದು, ಹಾಲು ಮಾರಾಟ ವ್ಯವಹಾರದ ಮೂಲಕ ತಿಂಗಳಿಗೆ 20,000 ರೂ. ಗಳಿಸುತ್ತಿದ್ದ ಎಂದು ಉಲ್ಲೇಖಿಸಿ ಶ್ರೀಹರಿ ಅವರ ಕುಟುಂಬ ಆರಂಭದಲ್ಲಿ ರೂ. 30 ಲಕ್ಷ ಪರಿಹಾರ ಕೊಡಿಸಬೇಕೆಂದು ಟ್ರಿಬುನಲ್ ಗೆ ಮನವಿ ಸಲ್ಲಿಸಿದ್ದರು. ಚಾಲಕ ಚಾಲನ ಪರವಾನಗಿ ಹೊಂದಿಲ್ಲದ ಕಾರಣ ಪ್ರಾಥಮಿಕವಾಗಿ ಬೈಕ್ ಮಾಲೀಕ ಸೂರಜ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿ ಮಾಡಿ 1. 53 ಲಕ್ಷ ರೂ. ಪರಿಹಾರ ನೀಡುವಂತೆ ಟ್ರಿಬ್ಯುನಲ್ ಏಪ್ರಿಲ್ 2022 ರ ಆದೇಶದಲ್ಲಿ ಹೇಳಿತ್ತು.
ಈ ಆದೇಶದಿಂದ ಸಮಾಧಾನಗೊಳ್ಳದ ಕುಟುಂಬಸ್ಥರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಮೂಲಕ ಸುಪ್ರೀಂ ಕೋರ್ಟ್ ಪೂರ್ವನಿದರ್ಶನಕ್ಕೆ ಅನುಗುಣವಾಗಿ ಮೊದಲು ಪರಿಹಾರವನ್ನು ಪಾವತಿಸಿ ನಂತರ ವಾಹನ ಮಾಲೀಕರಿಂದ ಮರು ಪಡೆಯುವಂತೆ ವಿಮಾ ಕಂಪನಿಗೆ ಸೂಚಿಸಬೇಕು ಎಂದು ವಾದಿಸಿದರು. ಇದಕ್ಕೆ ಪ್ರತಿಯಾಗಿ ವಾದಿಸಿದ ವಿಮಾದಾರರು, ಡ್ರೈವಿಂಗ್ ಲೈಸೆನ್ಸ್ ಇಲ್ಲದಿರುವುದು ನಿಯಮ ಉಲ್ಲಂಘನೆಯಾಗಿದ್ದು, ಹಕ್ಕುದಾರರು ಆರ್ಥಿಕವಾಗಿ ಶ್ರೀಹರಿಯ ಮೇಲೆ ಎಷ್ಟು ಅವಲಂಬನೆಯಾಗಿದ್ದರು ಎಂಬುದನ್ನು ಸಾಬೀತುಪಡಿಸಿಲ್ಲ ಎಂದು ವಾದಿಸಿದರು.
ಆದಾಗ್ಯೂ, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ PAY ಮತ್ತು Recovery ಸಿದ್ಧಾಂತವನ್ನು ಅನ್ವಯಿಸುವುದರೊಂದಿಗೆ ಹೈಕೋರ್ಟ್ ಕುಟುಂಬದ ಪರ ಆದೇಶ ನೀಡಿತು. ಅರ್ಜಿ ಸಲ್ಲಿಸಿದ ದಿನದಿಂದ ಮೊತ್ತವನ್ನು ಠೇವಣಿ ಇಡುವವರೆಗೆ ಶೇ.6ರಷ್ಟು ವಾರ್ಷಿಕ ಬಡ್ಡಿಯೊಂದಿಗೆ 21,28,800 ರೂ.ಗಳನ್ನು ಪಾವತಿಸುವಂತೆ ಪೀಠವು ವಿಮಾ ಕಂಪನಿಗೆ ಸೂಚಿಸಿದೆ.
Advertisement