News Highlights
ಸುದ್ದಿ ಮುಖ್ಯಾಂಶಗಳುonline desk

ಎನ್ ಕೌಂಟರ್: ನಕ್ಸಲ್ ನಾಯಕ ವಿಕ್ರಂ ಗೌಡ ಸಾವು; ಬೆಂಗಳೂರು ಟೆಕ್ ಶೃಂಗಸಭೆ: 'GCC ನೀತಿ' ಬಿಡುಗಡೆ, ಅನುದಾನ: ಸ್ವಪಕ್ಷದ ವಿರುದ್ಧವೇ ಶಾಸಕನ ಅಸಮಾಧಾನ; ಇವು ಇಂದಿನ ಪ್ರಮುಖ ಸುದ್ದಿಗಳು 19-11-2024

1. ಎನ್ ಕೌಂಟರ್: ನಕ್ಸಲ್ ನಾಯಕ ವಿಕ್ರಂ ಗೌಡ ಸಾವು

ಉಡುಪಿ ಜಿಲ್ಲೆಯ ಕಾರ್ಕಳದ ಪೀತಬೈಲುವಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದ್ದು, ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ. ಕಳೆದ ಕೆಲವು ದಿನಗಳಿಂದ ಹೆಬ್ರಿ-ಕಾರ್ಕಳ ಪ್ರದೇಶದಲ್ಲಿ ನಕ್ಸಲರ ಓಡಾಟ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಎಎನ್ಎಫ್ ಕಾರ್ಯಾಚರಣೆ ನಡೆಸಿದೆ. ಹತನಾಗಿರುವ ವಿಕ್ರಮ್ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕನಾಗಿದ್ದ. ಇತ್ತೀಚೆಗೆ ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಭಾಗದಲ್ಲಿ ಕೆಲವು ಗ್ರಾಮಗಳಿಗೆ ನಕ್ಸಲರು ಭೇಟಿ ನೀಡಿದ ಬಗ್ಗೆ ವರದಿಯಾಗಿತ್ತು. ಎನ್ ಕೌಂಟರ್ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಪೊಲೀಸರ ಮೇಲೆ ದಾಳಿ ನಡೆಸಿದ್ದರಿಂದ ವಿಕ್ರಮ್ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ. ಕಳೆದ 20 ವರ್ಷಗಳಿಂದ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ, ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ. ಈ ಹಿಂದೆ ನಡೆದ ಅನೇಕ ಎನ್‌ಕೌಂಟರ್ಗಳಲ್ಲಿ ವಿಕ್ರಮ್ ಗೌಡ ತಪ್ಪಿಸಿಕೊಂಡಿದ್ದ ಎಂದು ಗೃಹ ಸಚಿವರು ತಿಳಿಸಿದ್ದಾರೆ.

2. ಬೆಂಗಳೂರು ಟೆಕ್ ಶೃಂಗಸಭೆ:'GCC ನೀತಿ' ಬಿಡುಗಡೆ

ಬೆಂಗಳೂರು ಟೆಕ್ ಶೃಂಗಸಭೆಯ 27 ನೇ ಆವೃತ್ತಿ ಇಂದು ಉದ್ಘಾಟನೆಯಾಗಿದ್ದು, 'GCC ನೀತಿ' ಬಿಡುಗಡೆ ಮಾಡಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಭಾಗಿಯಾಗಿದ್ದರು. ಟೆಕ್ ಶೃಂಗಸಭೆಯಲ್ಲಿ ಉದ್ಯಮಕ್ಕಾಗಿ ಒಂದು ಲಕ್ಷ ಯುವಕರಿಗೆ ತರಬೇತಿ ನೀಡುವ ನಿಪುಣ ಕರ್ನಾಟಕ ಯೋಜನೆಗೂ ಚಾಲನೆ ನೀಡಲಾಯಿತು. ನಿಪುಣ ಕರ್ನಾಟಕ ಯೋಜನೆಗಾಗಿ ರಾಜ್ಯ ಸರ್ಕಾರವು ಮೈಕ್ರೋಸಾಫ್ಟ್, ಇಂಟೆಲ್, ಆಕ್ಸೆಂಚರ್, ಐಬಿಎಂ ಮತ್ತು ಇತರ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದೇ ವೇಳೆ ಅನ್‌ಬಾಕ್ಸಿಂಗ್ ಬೆಂಗಳೂರು ವರದಿಯನ್ನೂ ಬಿಡುಗಡೆ ಮಾಡಲಾಯಿತು. ಬೆಂಗಳೂರು ಟೆಕ್ ಸಮಿಟ್ 2024 ಕಾರ್ಯಕ್ರಮ 3 ದಿನಗಳ ಕಾಲ ನಡೆಯಲಿದೆ.

3. ಅನುದಾನ: ಸ್ವಪಕ್ಷದ ವಿರುದ್ಧವೇ ಶಾಸಕನ ಅಸಮಾಧಾನ

ಕಾಂಗ್ರೆಸ್‌ ಶಾಸಕ ರಾಜು ಕಾಗೆ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಮತ್ತೊಬ್ಬ ಶಾಸಕ ತಿರುಗಿ ಬಿದ್ದಿದ್ದು, ಅನುದಾನ ವಿಚಾರ ಪ್ರಸ್ತಾಪಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಕ್ಷೇತ್ರ ಅಭಿವೃದ್ಧಿ ಮಾಡಲು ಹಣ ಇಲ್ಲ. ನಮ್ಮದೇ ಸರ್ಕಾರ ಇದ್ದರೂ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ವಿಜಯ ನಗರ ಕಾಂಗ್ರೆಸ್ ಶಾಸಕ ಗವಿಯಪ್ಪ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಸಚಿವರೇ ನಮಗೆ ಕಿಮ್ಮತ್ತು ಕೊಡುತ್ತಿಲ್ಲ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ನಮ್ಮದೇ ಕ್ಷೇತ್ರದ ಜನರ ಸಮಸ್ಯೆಗಳಿಗೆ ನನ್ನಿಂದ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ, ನಾನು ಯಾವ ಪುರುಷಾರ್ಥಕ್ಕಾಗಿ ಶಾಸಕನಾಗಿರಬೇಕು ಎಂದು ಶಾಸಕರು ಪ್ರಶ್ನಿಸಿದ್ದಾರೆ.

4. ಸಂವಹನ ಉಪಗ್ರಹ ಜಿಸ್ಯಾಟ್-ಎನ್2 ಉಡಾವಣೆ ಯಶಸ್ವಿ- ಇಸ್ರೋ

ದೇಶದ ಇತ್ತೀಚಿನ ಸಂವಹನ ಉಪಗ್ರಹ ಜಿಸ್ಯಾಟ್-ಎನ್2 ನ್ನು ಎಲೋನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಅಮೆರಿಕದ ಕೇಪ್ ಕೆನವೆರಲ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಇಸ್ರೋದ ವಾಣಿಜ್ಯ ವಿಭಾಗ NSIL ತಿಳಿಸಿದೆ. ಈ ಉಪಗ್ರಹ ಉಡಾವಣೆ ದೇಶದ ಬ್ರಾಡ್‌ಬ್ಯಾಂಡ್ ಸೇವೆಗಳು ಮತ್ತು ವಿಮಾನದಲ್ಲಿ ಕನೆಕ್ಟಿವಿಟಿ ಹೆಚ್ಚಿಸುತ್ತದೆ ಮತ್ತು 14 ವರ್ಷ ಕಾರ್ಯಾಚರಣೆಯ ಅವಧಿಯನ್ನು ಹೊಂದಿದೆ ಜಿಸ್ಯಾಟ್-2 ಉಪಗ್ರಹವು ಭಾರತದ ಸ್ವಂತ ರಾಕೆಟ್‌ಗಳ ಹೊತ್ತೊಯ್ಯುವ ಸಾಮರ್ಥ್ಯವನ್ನು ಮೀರಿದೆ. ಹೀಗಾಗಿ ಇಸ್ರೋ ಅದರ ಉಡಾವಣೆಗಾಗಿ ಸ್ಪೇಸ್‌ ಎಕ್ಸ್‌ನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

5. ಬೆಂಗಳೂರು: ಸ್ಕೂಟರ್ ಶೋರೂಮ್ ನಲ್ಲಿ ಅಗ್ನಿ ಅವಘಡ

ಬೆಂಗಳೂರಿನ ರಾಜಾಜಿನಗರದಲ್ಲಿನ ಸ್ಕೂಟರ್ ಶೋರೂಮ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ಯುವತಿ ಸಾವನ್ನಪ್ಪಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ನಲ್ಲಿ ಈ ಅಗ್ನಿ ಅವಘಡ ನಡೆದಿದೆ. ಮೈ ಇವಿ ಸ್ಟೋರ್ ನಲ್ಲಿದ್ದ 45 ಕ್ಕೂ ಹೆಚ್ಚು ವಾಹನಗಳು ಭಸ್ಮವಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

6. ಚಿತ್ರದುರ್ಗ: ಬಾಂಗ್ಲಾದೇಶದ 6 ಪ್ರಜೆಗಳ ಬಂಧನ

ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಬಳಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶದ 6 ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವೆಂಬರ್ 18 ರಂದು, ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಅರವಿಂದ್ ಗಾರ್ಮೆಂಟ್ಸ್ ಮತ್ತು ವೈಟ್ ವಾಶ್ ಗಾರ್ಮೆಂಟ್ಸ್ ಬಳಿ ಗಸ್ತು ತಿರುಗುತ್ತಿದ್ದಾಗ, ಧವಳಗಿರಿ ಲೇಔಟ್‌ನ ಎರಡನೇ ಹಂತದಲ್ಲಿ ಆರು ಬಾಂಗ್ಲಾದೇಶ ಪ್ರಜೆಗಳನ್ನು ಬಂಧಿಸಲಾಗಿದೆ. ಅವರ ಬಳಿ ದೊರೆತ ದಾಖಲೆಗಳ ವಿಚಾರಣೆ ಮತ್ತು ಪರಿಶೀಲನೆಯ ನಂತರ, ಅವರು ಬಾಂಗ್ಲಾದೇಶದ ಪ್ರಜೆಗಳು ಎಂದು ತಿಳಿದುಬಂದಿದೆ.

X

Advertisement

X
Kannada Prabha
www.kannadaprabha.com