ಬೆಂಗಳೂರು: ವಕ್ಫ್ ಮಂಡಳಿಯಿಂದ ರೈತರ ಭೂಮಿ ಒತ್ತುವರಿ ವಿರೋಧಿಸಿ ನವೆಂಬರ್ 21 ಮತ್ತು 22 ರಂದು ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ. 'ನಮ್ಮ ಭೂಮಿ, ನಮ್ಮ ಹಕ್ಕು' ಘೋಷಣೆಯಡಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸುದ್ದಿಗಾರರಿಗೆ ತಿಳಿಸಿದರು.
ಪ್ರತಿಭಟನೆ ವೇಳೆಯಲ್ಲಿ ತೊಂದರೆಗೀಡಾದ ರೈತರಿಂದ ದೂರು ಹಾಗೂ ಮಾಹಿತಿಯನ್ನು ಸ್ವೀಕರಿಸಲಾಗುವುದು. ಅಹವಾಲು ಸ್ವೀಕಾರಕ್ಕಾಗಿ ರೈತರು, ವಕೀಲರು ಮತ್ತು ಪ್ರಮುಖ ಪ್ರತಿನಿಧಿಗಳನ್ನೊಳಗೊಂಡ ಐವರು ಸದಸ್ಯರ ತಂಡವೊಂದನ್ನು ಎಲ್ಲಾ ಜಿಲ್ಲೆಗಳಲ್ಲಿ ರಚಿಸಲಾಗಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.
ಮೇಲುಸ್ತುವಾರಿಗಾಗಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ , ಹಿರಿಯ ನಾಯಕರು ಮತ್ತಿತರನ್ನೊಳಗೊಂಡ ಮೂರು ತಂಡವನ್ನು ರಚಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ಡಿಸೆಂಬರ್ ಆರಂಭದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ರೈತರು, ಧಾರ್ಮಿಕ ಮುಖಂಡರು ಮತ್ತಿತರಿಂದ ಮಾಹಿತಿ ಸಂಗ್ರಹಿಸಲಿದೆ.
ಪ್ರಾಮಾಣಿಕವಾಗಿ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವರದಿಯನ್ನು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಅಶ್ವತ್ಥ ನಾರಾಯಣ ತಿಳಿಸಿದರು. ವಕ್ಫ್ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
Advertisement