ಬೆಂಗಳೂರು: ನಾವು ಯಾರ ಅನ್ನವನ್ನು ಕಸಿಯುತ್ತಿಲ್ಲ, ಬಿಜೆಪಿಗೆ ರಾಜಕೀಯ ಮಾಡುವುದು ಬಿಟ್ಟು ಬೇರೇನು ಕೆಲಸ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಬೇರೇನು ಕೆಲಸವಿದೆ. ನಮ್ಮ ಕ್ಷೇತ್ರದಲ್ಲೂ ಶೇ 90 ರಷ್ಟು ಹಾಗೂ ಹೊಳೆನರಸೀಪುರದಲ್ಲಿ ಶೇ 92 ಬಿಪಿಎಲ್ ಕಾರ್ಡುದಾರರಿದ್ದಾರೆ. ಹೀಗಾಗಿ ಇವುಗಳನ್ನು ಪರಿಶೀಲನೆ ಮಾಡಬೇಕಲ್ಲವೇ. ನಿಜವಾದ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಕ್ಕಿದೆಯೇ ಇಲ್ಲವೇ ಎಂದು ನೋಡಬೇಕಾಗಿದೆ. ಕೆಲವು ಮಾನದಂಡಗಳ ಆಧಾರದ ಮೇಲೆ ಕೆಲವು ಬಿಪಿಎಲ್ ಕಾರ್ಡು ರದ್ದಾಗಿವೆ ಎಂದರು.
1 ಸಾವಿರ ಕೋಟಿ ಎಲ್ಲಿಂದ ಬಂತು? ಶಾಸಕರ ಖರೀದಿಗಾಗಿ 50 ಕೋಟಿಯಿಂದ 100 ಕೋಟಿವರೆಗೂ ಆಮಿಷ ನೀಡಲಾಗುತ್ತಿದೆ ಎಂಬ ವಿಚಾರದ ಬಗ್ಗೆ ಕೇಳಿದಾಗ, "ಬಿಜೆಪಿಯವರು ಮೊದಲು ಯತ್ನಾಳ್ ಅವರ 1000 ಕೋಟಿ ಬಗ್ಗೆ ಉತ್ತರ ನೀಡಲಿ. ಆ ಹಣ ಎಲ್ಲಿಂದ ಬಂತು? ಯಾರು ಕಲೆ ಹಾಕಿ, ಯಾರಿಗೆ ಕೊಟ್ಟರು? ಈ ವಿಚಾರದಲ್ಲಿ ನಮ್ಮನ್ನು ಪ್ರಶ್ನೆ ಮಾಡುವ ಬದಲು ವಿಜಯೇಂದ್ರ ಹಾಗೂ ಅಶೋಕ್, ಎನ್ ಡಿಎ ನಾಯಕರನ್ನು ಪ್ರಶ್ನೆ ಮಾಡಿ. ಅವರು ಎಲ್ಲಾ ವಿಚಾರದಲ್ಲೂ ತನಿಖೆ ಮಾಡುತ್ತಾರಲ್ಲ. ಈ ವಿಚಾರದಲ್ಲಿ ಅವರ ಪಕ್ಷದ ಆಂತರಿಕ ತನಿಖೆ ನಡೆಯಲಿ. ನಮ್ಮ ತನಿಖೆ ನಾವು ಮಾಡುತ್ತೇವೆ. ಮಾಧ್ಯಮಗಳು ಯಾಕೆ ಏಕಪಕ್ಷೀಯವಾಗಿವೆ" ಎಂದು ಕೇಳಿದರು.
ಜಯನಗರ ಶಾಸಕರು ಹೋರಾಟ ನಡೆಸುವ ಬಗ್ಗೆ ಕೇಳಿದಾಗ, "ಅವರು ನೂರು ಸಭೆ ಮಾಡಲಿ. ಅದು ಮಂತ್ರಿಗಳ ವಿಶೇಷ ಅನುದಾನ. ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವನಾದ ಬಳಿಕ ಬೆಂಗಳೂರು ಅಧೋಗತಿಗೆ ಬಂದಿದೆ ಎಂದು ಹೇಳಿದ್ದಾರೆ. ನನ್ನಿಂದ ಬೆಂಗಳೂರು ಹೇಗೆ ಅಧೋಗತಿಗೆ ಬಂದಿದೆ ಎಂದು ಅವರು ವಿವರಣೆ ನೀಡಲಿ. ಆರ್ ಆರ್ ನಗರ, ಪದ್ಮನಾಭನಗರ ಸೇರಿದಂತೆ ಬಿಜೆಪಿಯ ಎಲ್ಲಾ ಶಾಸಕರ ಕ್ಷೇತ್ರಕ್ಕೆ ನಾನು ಕೊಟ್ಟಿಲ್ಲವೇ? ನಾನು ಬಂದ ಮೇಲೆ ಯಾವ ರೀತಿ ಅಧೋಗತಿ ಬಂದಿದೆ ಎಂದು ಆ ಕ್ಷೇತ್ರಕ್ಕೆ ಹೋಗಿ ಭೇಟಿ ನೀಡುತ್ತೇನೆ" ಎಂದು ತಿಳಿಸಿದರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದೆ. ಮಹಾವಿಕಾಸ್ ಅಗಾಡಿ ಮೈತ್ರಿಕೂಟ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷಕ್ಕೆ ಜನ ಅಭೂತಪೂರ್ವ ಬೆಂಬಲ ನೀಡುತ್ತಿದ್ದು, ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಇದ್ದ ಅನುಮಾನ ಬಗೆಹರಿದಿದೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ"ಎಂದರು.
Advertisement