ಮೈಸೂರು: ಮುಡಾದ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಮಂಗಳವಾರ ಮೈಸೂರು ಲೋಕಾಯುಕ್ತ ಎಸ್.ಪಿ. ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮುಡಾದಿಂದ ವಿಜಯನಗರದಲ್ಲಿ 14 ನಿವೇಶನಗಳನ್ನು ನಿಯಮ ಮೀರಿ ಹಂಚಿಕೆ ಮಾಡಿದ ಆರೋಪ ಅವರ ಮೇಲಿದೆ. ಈ ಸಂಬಂಧ ವಿಚಾರಣೆಗೆ ಬರುವಂತೆ ಪ್ರಕರಣದ ತನಿಖಾಧಿಕಾರಿ ಟಿ.ಜೆ. ಉದೇಶ್ ನೋಟಿಸ್ ನೀಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬಿಎಂ ಸೇರಿದಂತೆ ಇತರರಿಗೆ 14 ನಿವೇಶನ ಹಂಚಿಕೆ ಮಾಡಿರುವ ಆರೋಪ ನಟೇಶ್ ಮೇಲಿದೆ. ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿಗೆ ಮುಡಾ ಮಾಜಿ ಆಯುಕ್ತರು ವಿಚಾರಣೆಗಾಗಿ ಕೆಲವು ದಾಖಲೆಗಳನ್ನು ತಂದು ತನಿಖಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತ ಕಚೇರಿಯ ಹೊರಗೆ ಸುದ್ದಿಗಾರರು ನಟೇಶ್ ಅವರನ್ನು ಮಾತನಾಡಿಸಲು ಪ್ರಯತ್ನಿಸಿದರು. ಈ ವೇಳೆ ಅಸಮಾಧಾನಗೊಂಡ ನಟೇಶ್ ಮಾಧ್ಯಮದವರ ವಿರುದ್ಧ ಹರಿಹಾಯ್ದರು "ನಾನು ಇಲ್ಲಿ ಡ್ಯಾನ್ಸ್ ಮಾಡುತ್ತಿದ್ದೇನೆಯೇ? ನೀವು ನನ್ನ ವೀಡಿಯೊವನ್ನು ಏಕೆ ರೆಕಾರ್ಡ್ ಮಾಡುತ್ತಿದ್ದೀರಿ? ಎಂದು ಕಚೇರಿ ಒಳಗೆ ಹೋಗುವ ಮೊದಲು ಅವರು ಕಿಡಿಕಾರಿದರು.
ಈಗಾಗಲೇ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದ ಹಲವು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಿವೇಶನ ಹಂಚಿಕೆ ನಿಯಮ ಉಲ್ಲಂಘನೆಯಲ್ಲಿ ಭಾಗಿಯಾಗಿರುವ ಮುಡಾ ಮಾಜಿ ಆಯುಕ್ತ ಕಾಂತರಾಜು ಮತ್ತು ಮುಡಾ ಮಾಜಿ ಅಧ್ಯಕ್ಷ ಡಿ.ಧ್ರುವಕುಮಾರ್ ಸೇರಿದಂತೆ ಪ್ರಕರಣದ ಇತರ ಪ್ರಮುಖ ವ್ಯಕ್ತಿಗಳಿಗೂ ನೋಟಿಸ್ ನೀಡಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಮುಡಾ ಮಾಜಿ ಅಧ್ಯಕ್ಷ ಡಿ ದೇವರಾಜು ಅವರಿಗೆ ಸಮನ್ಸ್ ನೀಡಿದ್ದು, ವಿಚಾರಣೆಗೆ ಎರಡನೇ ಬಾರಿಗೆ ಹಾಜರಾದರು. ಈಮಧ್ಯೆ, ಕಾರ್ಯಕರ್ತ ಗಂಗರಾಜು ಲೋಕಾಯುಕ್ತ ಕಚೇರಿಯ ಹೊರಗೆ ಕಪ್ಪು ಬಾವುಟ ಪ್ರದರ್ಶಿಸಿ ನಟೇಶ್ ಬಂಧನಕ್ಕೆ ಒತ್ತಾಯಿಸಿದರು. ಗಂಗರಾಜು ಅವರು ನಡೆಯುತ್ತಿರುವ ತನಿಖೆ ಬಗ್ಗೆ ಟೀಕಿಸಿ, ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
Advertisement