ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಂದ ಈ ವರ್ಷ ರಾಜ್ಯಕ್ಕೆ ಸಾಲದ ಮೊತ್ತವನ್ನು ಕಡಿತ ಮಾಡಿದ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ಸಮಯಾವಕಾಶ ಕೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ವರ್ಷ ರಾಜ್ಯಕ್ಕೆ ನಬಾರ್ಡ್ ಸಾಲ ಕಡಿಮೆಯಾಗಿದೆ. ಕಳೆದ ವರ್ಷ 5,600 ಕೋಟಿ ರೂ. ಇತ್ತು. ಈ ವರ್ಷ 2,340 ಕೋಟಿ ರೂ.ಗೆ ಅಂದರೆ ಶೇ. 58ರಷ್ಟು ಕಡಿಮೆಯಾಗಿದೆ. ಹೀಗಾಗಿ ದೆಹಲಿಗೆ ತೆರಳಲಿರುವ ನಾನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸುತ್ತೇನೆ ಎಂದರು. ಇಂದು ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಲಿರುವ ಸಿದ್ದರಾಮಯ್ಯ ನಾಳೆ ದೆಹಲಿಯಲ್ಲಿ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ.
ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ BPL ಕಾರ್ಡುದಾರರ ಪೈಕಿ 22.63 ಲಕ್ಷ ನಕಲಿ ಕಾರ್ಡ್ ಗಳಿವೆ. ಈ ವರ್ಷದ ಆಗಸ್ಟ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ 22,62,482 ಅನರ್ಹ ಬಿಪಿಎಲ್ ಕಾರ್ಡುದಾರರು ಪತ್ತೆಯಾಗಿದೆ. ಕಳೆದ ಆಗಸ್ಟ್ ನಲ್ಲೇ ಆಹಾರ ಇಲಾಖೆಗೆ ಇ ಗವರ್ನೆನ್ಸ್ ಇಲಾಖೆ ಈ ಮಾಹಿತಿ ನೀಡಿತ್ತು. ಈಗಾಗಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳು ರದ್ದಾಗಲಿದೆಯೇ ಎಂಬ ಅನುಮಾನ ಈಗ ಮೂಡಿದೆ. ಇನ್ನು ಅನರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಕ್ರಮವನ್ನು ಸಮರ್ಥಿಸಿಕೊಂಡ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ ಎಚ್ ಮುನಿಯಪ್ಪ, ದಕ್ಷಿಣದ ರಾಜ್ಯಗಳು ಸಾಮಾನ್ಯವಾಗಿ ತಮ್ಮ ಜನಸಂಖ್ಯೆಯ ಶೇಕಡಾ 50ಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡುದಾರರನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ. ರು. ಚನ್ನಬಸಪ್ಪ ಆಯ್ಕೆಯಾಗಿದ್ದಾರೆ. ಡಿಸೆಂಬರ್ 20ರಿಂದ ಮೂರು ದಿನ ಕಾಲ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ ರು ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಚನ್ನಬಸಪ್ಪ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ ಇವರ ಪ್ರಮುಖ ಕೃತಿಗಳಾಗಿವೆ.
ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆ ಸಂಕಷ್ಟ ಶುರುವಾಗಿದೆ. ತನ್ನ ಸಹಿ ನಕಲು ಮಾಡಿದ್ದಾರೆಂದು ಆರೋಪಿಸಿ ಪುತ್ರ ಶ್ರವಣ್ ತಂದೆಯ ವಿರುದ್ಧವೇ ದೂರು ದಾಖಲಿಸಿದ್ದಾರೆ. ಸಿಪಿ ಯೋಗೇಶ್ವರ ಅವರ ಮೊದಲ ಪತ್ನಿ ಮಂಜುಳಾ ಮತ್ತು ಪುತ್ರ ಶ್ರವಣ್ ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದರು. ಈ ಮನೆಯನ್ನು ಶ್ರವಣ್ ಹಾಗೂ ಮಂಜುಳಾ ಇಬ್ಬರೂ ಸೇರಿ ನಿಶಾ ಯೋಗೇಶ್ವರ್ ಗೆ ಉಡುಗೊರೆಯಾಗಿ ನೀಡಿದ್ದರು. ಆದರೆ ಇದೀಗ ತಂದೆ ಯೋಗೇಶ್ವರ್ ಅವರು ಆ ಮನೆಗೆ ಸಂಬಂಧಿಸಿದಂತೆ ನನ್ನ ನಕಲಿ ಸಹಿ ಬಳಸಿ ನನ್ನ ಅಮ್ಮ ಮತ್ತು ಸಹೋದರಿ ನಿಶಾ ಯೋಗೇಶ್ವರ್ ನಾನು ಪಾಲು ಕೇಳಿರುವಂತೆ ನೋಟಿಸ್ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶ್ರವಣ್ ದೂರಿನ ಅನ್ವಯ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
ಹೇರ್ ಡ್ರೈಯರ್ ಸ್ಫೋಟಗೊಂಡ ಪರಿಣಾಮ ಮಹಿಳೆಯೊಬ್ಬರ ಎರಡು ಕೈಗಳ ಬೆರಳುಗಳು ಛಿದ್ರವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ಮೃತ ಯೋಧ ಪಾಪಣ್ಣ ಪತ್ನಿ ಬಸಮ್ಮ ಯರನಾಳ ಗಾಯಗೊಂಡಿದ್ದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಶಿಕಲಾ ಎಂಬುವರು ಆನ್ ಲೈನ್ ನಲ್ಲಿ ಹೇರ್ ಡ್ರೈಯರ್ ಬುಕ್ ಮಾಡಿದ್ದರು. ಡೆಲಿವರಿ ಸಮಯದಲ್ಲಿ ಶಶಿಕಲಾ ಮನೆಯಲ್ಲಿ ಇಲ್ಲದ ಕಾರಣ ಬಸಮ್ಮ ಪಾರ್ಸಲ್ ತೆಗೆದುಕೊಂಡಿದ್ದು, ಕೊರಿಯರ್ ಓಪನ್ ಮಾಡಿ ಸ್ವೀಚ್ ಆನ್ ಮಾಡಿದ ತಕ್ಷಣ ಹೇರ್ ಡ್ರೈಯರ್ ಸ್ಫೋಟಗೊಂಡಿದೆ ಎನ್ನಲಾಗಿದೆ. ಈ ಸಂಬಂಧ ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
Advertisement