ಬೆಂಗಳೂರು/ನವದೆಹಲಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿಮಿತ್ತ ಇಂದು ಗುರುವಾರ ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ, ಮುಡಾ ಹಗರಣ ಕುರಿತು ಕಾಂಗ್ರೆಸ್ ನ ನಾಯಕರುಗಳಾದ ಅಭಿಷೇಕ್ ಸಿಂಘ್ವಿ ಜೊತೆಗೆ ಮುಂದಿನ ಕಾನೂನು ಹೋರಾಟಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಮುಡಾ ಪ್ರಕರಣ, ವಕ್ಫ್ ವಿವಾದ ಮತ್ತು ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈ ಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಮುಡಾ ಪ್ರಕರಣದ ಬಗ್ಗೆ ಕಾನೂನು ತಜ್ಞರ ಸಲಹೆ
ಇಂದು ಬೆಳಗ್ಗೆ ಕೆಎಂಎಫ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸಿದ್ದರಾಮಯ್ಯ ಅವರು ಹೈ ಕಮಾಂಡ್ ನಾಯಕರ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಅವರನ್ನು ಸಿಎಂ ಭೇಟಿ ಮಾಡುವ ಸಾಧ್ಯತೆ ಇದೆ. ಮುಡಾ ಪ್ರಕರಣ ಸಂಬಂಧಿಸಿದಂತೆ ಇಡಿಯಿಂದ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಒಂದು ವೇಳೆ ಇಡಿಯಿಂದ ನೋಟಿಸ್ ಜಾರಿಯಾದರೆ ಯಾವ ರೀತಿಯ ಕಾನೂನು ಹೋರಾಟ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ತಮಗೆ ಅಥವಾ ಪತ್ನಿ ಪಾರ್ವತಿ ಅವರಿಗೆ ಇಡಿ ನೋಟಿಸ್ ಜಾರಿ ಮಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ, ಕಾನೂನು ತಜ್ಞರಿಂದ ಒಂದಷ್ಟು ಸಲಹೆ ಪಡೆಯುವ ಸಾಧ್ಯತೆ ಇದೆ.
ಸಂಪುಟ ಪುನರ್ರಚನೆ: ಹೈಕಮಾಂಡ್ ಭೇಟಿ ವೇಳೆ ರಾಜ್ಯದ ಇತ್ತೀಚಿನ ರಾಜಕೀಯ ವಿದ್ಯಮಾನ ಕುರಿತು ಸಿಎಂ ಮಾಹಿತಿ ನೀಡಲಿದ್ದಾರೆ. ಮೂರು ಕ್ಷೇತ್ರಗಳ ಉಪ ಚುನಾವಣೆ, ವಕ್ಫ್ ವಿವಾದ ಹಾಗೂ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂಪುಟ ಪುನಾರಚನೆ ಕುರಿತು ಸಾಕಷ್ಟು ಒತ್ತಾಯ ಕೇಳಿ ಬರುತ್ತಿರುವ ಹಿನ್ನಲೆ ಹೈ ಕಮಾಂಡ್ ಜೊತೆಗೆ ಚರ್ಚಿಸಿ ಸಂಪುಟ ಪುನಾರಚನೆ ಕುರಿತು ಸಿಎಂ ಸಲಹೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ದೆಹಲಿ ಪ್ರವಾಸ ಮುಗಿಸಿ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಆಗಮಿಸಲಿದ್ದಾರೆ. ಮೈಸೂರಿನಲ್ಲಿ ನಾಳೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಾಳೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
Advertisement