ಬೆಂಗಳೂರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIM-B) ನಲ್ಲಿ ಜಾತಿ ತಾರತಮ್ಯ ನಡೆಯುತ್ತಿದ್ದು, ನಿರ್ದೇಶಕರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಂಘ (AIOBCSA), ಡಾ ಬಿಆರ್ ಅಂಬೇಡ್ಕರ್ ಅಸೋಸಿಯೇಷನ್ ಆಫ್ ಇಂಜಿನಿಯರ್ಸ್ (BANAE), ಮತ್ತು ಒಬಿಸಿ ಫೆಡರೇಶನ್ ಆಫ್ ಇಂಡಿಯಾದಿಂದ ಆಯೋಜಿಸಲಾದ ಪ್ರತಿಭಟನಾಕಾರರು, ಮೀಸಲಾತಿ ನೀತಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಐಐಎಂ-ಬಿ ನಿರ್ದೇಶಕ ಪ್ರೊಫೆಸರ್ ಋಷಿಕೇಶ ಟಿ ಕೃಷ್ಣನ್ ಅವರ ರಾಜೀನಾಮೆಗೆ ಒತ್ತಾಯಿಸಿದರು.
ನ್ಯಾಯ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯ ಸಾಂವಿಧಾನಿಕ ಆದೇಶಗಳನ್ನು ಎತ್ತಿಹಿಡಿಯಲು ಸಂಸ್ಥೆಯು ವಿಫಲವಾಗಿದೆ ಎಂದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರಿನಲ್ಲಿ ಪ್ರಾತಿನಿಧ್ಯದ ಕೊರತೆ ಕಂಡುಬರುತ್ತವೆ ಎಂದು ಪ್ರತಿಭಟನಾಕಾರರಾದ ಸಿಖಾ ಎಂ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡುತ್ತಾ ಹೇಳಿದರು.
ಮೀಸಲಾತಿ ಜಾರಿಗೆ ಆಗ್ರಹ
ಮಂಜೂರಾದ 120 ಅಧ್ಯಾಪಕರ ಹುದ್ದೆಗಳಲ್ಲಿ 110 ಮಂದಿ ಮಾತ್ರ ಭರ್ತಿಯಾಗಿದ್ದು, ಕೇವಲ 16 ಮಂದಿ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಐದು ಪರಿಶಿಷ್ಟ ಜಾತಿ (ಎಸ್‌ಸಿ), ಒಂದು ಪರಿಶಿಷ್ಟ ಪಂಗಡ (ಎಸ್‌ಟಿ), ಮತ್ತು ಹತ್ತು ಇತರೆ ಹಿಂದುಳಿದ ವರ್ಗಗಳಿಂದ (ಒಬಿಸಿ) ಇದ್ದಾರೆ.
ಉನ್ನತ ಶಿಕ್ಷಣದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದು, ಎಲ್ಲಾ ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿ ಹುದ್ದೆಗಳಲ್ಲಿ ಎಸ್ ಸಿ, ಎಸ್ ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾತಿ ನೀತಿಗಳನ್ನು ತಕ್ಷಣವೇ ಜಾರಿಗೊಳಿಸಲು ಎಂದು ಒತ್ತಾಯಿಸಿದರು. ಜಾತಿ ಸಂಬಂಧಿತ ದೂರುಗಳನ್ನು ನಿರ್ವಹಿಸಲು ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಐಐಎಂ-ಬಿಯಲ್ಲಿ ಎಸ್ ಸಿ, ಎಸ್ ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾದ ಕುಂದುಕೊರತೆ ನಿವಾರಣಾ ಕೋಶಗಳನ್ನು ರಚಿಸಬೇಕೆಂದು ಅವರು ಒತ್ತಾಯಿಸಿದರು.
ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನಾಕಾರರು ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಕೇಂದ್ರ ಶಿಕ್ಷಣ ಸಚಿವರ ಮುಂದೆ ಸಮಸ್ಯೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ.
Advertisement