ಪಡಿತರ ಚೀಟಿ ಪರಿಷ್ಕರಣೆ ಕುರಿತಂತೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್ ಸರ್ಕಾರ ಇದೀಗ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಪ್ರಕ್ರಿಯೆಯನ್ನುನಿಲ್ಲಿಸಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಹೆಚ್ ಮುನಿಯಪ್ಪ, ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ, BPL, APL ಕಾರ್ಡ್ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದರು. 'ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಟ್ಟು 1,50,59,431 ಕಾರ್ಡ್ಗಳಿವೆ. ಮುಖ್ಯಮಂತ್ರಿಗಳು ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಎಲ್ಲಾ BPL ಕಾರ್ಡ್‌ಗಳನ್ನು ಮರುಸ್ಥಾಪಿಸುವಂತೆ ಸೂಚಿಸಿದ್ದಾರೆ. ಅದಾಗಲೇ 1,02,509 ಕಾರ್ಡ್ಗಳನ್ನು ಪರಿಷ್ಕರಣೆ ಮಾಡಲಾಗಿದೆ. ಇನ್ನುಳಿದ ಎಲ್ಲ BPL, APL ಕಾರ್ಡ್ಗಳನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಿರುವ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರ್ಯಾಂಡ್ ಇದೀಗ ಉತ್ತರ ಭಾರತದಲ್ಲೂ ತನ್ನ ಕದಂಬ ಬಾಹುಗಳನ್ನು ಚಾಚಲು ಹೊರಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದರು. ಈ ಮೂಲಕ ಅಮುಲ್ ಮತ್ತು ಮದರ್ ಡೇರಿಯಂತಹ ಪ್ರಮುಖ ಬ್ರ್ಯಾಂಡ್ಗಳ ಜತೆ ಕರ್ನಾಟಕದ ನಂದಿನಿ ಕೂಡ ಪೈಪೋಟಿ ನೀಡಲಿದೆ. ಇದೇ ವೇಳೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ದೆಹಲಿಯಲ್ಲಿ 3 ರಿಂದ 4 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಬೇಕು ಎಂಬ ಗುರಿ ಹಾಕಿಕೊಂಡಿದ್ದೇವೆ ಎಂದು ಹೇಳಿದರು.
ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, 2024-25ರ ಆರ್ಥಿಕ ವರ್ಷದಲ್ಲಿ ಅಲ್ಪಾವಧಿ ಕೃಷಿ ಸಾಲಗಳ ಮಿತಿಯನ್ನು ಹೆಚ್ಚಿಸುವಂತೆ ಒತ್ತಾಯಿಸಿದರು. 2024-25ರಲ್ಲಿ ನಬಾರ್ಡ್‌ಗೆ 9,162 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೇವಲ 2340 ಕೋಟಿ ರೂಪಾಯಿ ಸಾಲವನ್ನು ಮಾತ್ರ ಅನುಮೋದಿಸಿದೆ. ಕೃಷಿ ಸಾಲವನ್ನು ಶೇ.58ರಷ್ಟು ಕಡಿತ ಮಾಡಿರುವುದರಿಂದ ರಾಜ್ಯದ ರೈತರಿಗೆ ಬಹುದೊಡ್ಡ ಸಂಕಷ್ಟ ಎದುರಾಗಿದೆ. ಹಾಗಾಗಿ ಈ ಸಾಲದ ಮಿತಿಯನ್ನು ಹೆಚ್ಚಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿದರು. 2024-25ನೇ ಸಾಲಿನಲ್ಲಿ 35 ಲಕ್ಷ ರೈತರಿಗೆ 25,000 ಕೋಟಿ ರೂಪಾಯಿಗಳ ಅಲ್ಪಾವಧಿಯ ಕೃಷಿ ಸಾಲವನ್ನು ವಿತರಿಸುವ ಗುರಿಯನ್ನು ಕರ್ನಾಟಕ ಹೊಂದಿದೆ. 2023-24ರಲ್ಲಿ ರಾಜ್ಯವು ಸಹಕಾರಿ ಸಾಲ ರಚನೆಯ ಮೂಲಕ ಈಗಾಗಲೇ 22,902 ಕೋಟಿ ರೂ. ಸಾಲ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದು ಬೆಂಗಳೂರು, ಮಂಗಳೂರು ಸೇರಿದಂತೆ 4 ಕಡೆಗಳ 25 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಟೌನ್ ಪ್ಲಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ಅವರ ಬನಶಂಕರಿ 3ನೇ ಹಂತದ ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದು ಅಪಾರ ಮೌಲ್ಯದ ಆಸ್ತಿ ದಾಖಲೆಗಳು, ಚಿನ್ನಾಭರಣ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. 23ಕ್ಕೂ ಹೆಚ್ಚು ಚಿನ್ನದ ಸರ, 28ಕ್ಕೂ ಹೆಚ್ಚು ಜೊತೆ ಓಲೆ, ಮುತ್ತಿನ ಹಾರ ಪತ್ತೆಯಾಗಿದೆ. ಕೋಟಿ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೆಸ್, ಚಿನ್ನದ ಉಂಗುರಗಳು, 8 ಲಕ್ಷ ರೂಪಾಯಿ ನಗದು ಸಿಕ್ಕಿವೆ. ಇದೇ ವೇಳೆ, ಚಿಕ್ಕಬಳ್ಳಾಪುರದಲ್ಲಿ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ, ಮಂಡ್ಯದಲ್ಲಿ ಕಾವೇರಿ ನೀರವಾಯಿ ನಿಗಮದ ಎಂಡಿ ಮಹೇಶ್ ಹಾಗೂ ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಎಸ್ಪಿ ಮೋಹನ್, ಬೆಂಗಳೂರು ನಗರದ ಅಬಕಾರಿ ಅಧೀಕ್ಷಕ ಕೆ.ಮೋಹನ್ ಮನೆ ಮೇಲೆ ದಾಳಿ ಮಾಡಲಾಗಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಮನೋಹರ್ ತಹಶೀಲ್ದಾರ್ ಅವರು ಇಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಲಿಜ ಸಮುದಾಯಕ್ಕೆ ಸೇರಿದ್ದ ತಹಶೀಲ್ದಾರ್, ಈ ಹಿಂದೆ ಎಸ್.ಎಂ. ಕೃಷ್ಣ ಸರ್ಕಾರದ ವೇಳೆ ವಿಧಾನಸಭೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 1978ರಲ್ಲಿ ಮೊದಲ ಬಾರಿಗೆ ಹಾನಗಲ್ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾದ ಮನೋಹರ್ ತಹಶೀಲ್ದಾರ್ 1989, 1999, 2013 ಸೇರಿ 4 ಬಾರಿ ಗೆಲುವು ಸಾಧಿಸಿದ್ದರು.
Advertisement