ವಕ್ಫ್ ನೋಟಿಸ್ಗಳ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಕರ್ನಾಟಕದಾದ್ಯಂತ ನಮ್ಮ ಭೂಮಿ, ನಮ್ಮ ಹಕ್ಕು ಘೋಷಣೆಯಡಿ ಪ್ರತಿಭಟನೆ ನಡೆಸಿತು. ಕೋಲಾರದಿಂದ ಮಂಗಳೂರಿನವರೆಗೆ, ಬೆಂಗಳೂರಿನಿಂದ ವಿಜಯಪುರದವರೆಗ ವಕ್ಫ್ ವಿವಾದ ವಿರೋಧಿಸಿ ಪ್ರತಿಭಟನೆಗಿಳಿದಿದೆ. ಕೂಡಲೇ ಗೆಜೆಟ್ ನೋಟಿಫಿಕೇಷನ್ ರದ್ದು ಮಾಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ರದ್ದಾಗಲಿ, ವಕ್ಫ್ ಬೋರ್ಡ್ ರದ್ದಾಗಲಿ ಎಂಬ ಘೋಷಣೆ ಬಿಜೆಪಿ ಪ್ರತಿಭಟನೆ ವೇಳೆ ಎಲ್ಲೆಡೆ ಕೇಳಿಬಂತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. 1500 ವರ್ಷಗಳ ಹಿಂದೆ ಅಲ್ಲಾನು ಇರಲಿಲ್ಲ, ಮುಲ್ಲಾನೂ ಇರಲಿಲ್ಲ. ಅಲ್ಲಿದ್ದದ್ದು ಕೇವಲ ಪರಮೇಶ್ವರ. ಈಗ ವಿರಕ್ತ ಮಠದ ಜಮೀನು, ಅಲಂದ ವೀರಲಿಂಗೇಶ್ವರ ಗುಡಿ, ಹಿಂದೂಗಳ ಸ್ಮಶಾನ ನಮ್ಮದು ಎಂದು ಹೇಳಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದರು.
ಉದ್ಯಮಿ ಗೌತಮ್ ಅದಾನಿ ವಿರುದ್ಧ ಅರೆಸ್ಟ್ ವಾರೆಂಟ್ ಬಂದಿದ್ದರೂ ಕೇಂದ್ರ ತನಿಖಾ ಸಂಸ್ಥೆಗಳು ಅವರನ್ನು ಏಕೆ ಬಂಧಿಸಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು? ತಕ್ಷಣ ಅದಾನಿಯನ್ನು ಬಂಧಿಸಬೇಕು, ಇಲ್ಲದಿದ್ದರೆ ಅವರು ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿಎಂ, ಅದಾನಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಪದೇ ಪದೇ ಹಾಳಾಗುತ್ತಿದೆ. ಅದಾನಿಗೆ ರಕ್ಷಣೆ ಕೊಡುತ್ತಿರುವವರು ಯಾರು ಎನ್ನುವುದು ದೇಶಕ್ಕೇ ಗೊತ್ತಿದೆ. ಆದರೆ ಮಾಧ್ಯಮಗಳು ಈ ಬಗ್ಗೆ ಮಾತನಾಡುತ್ತಿಲ್ಲ. ಈ ಸತ್ಯವನ್ನು ಮಾಧ್ಯಮಗಳು ದೇಶದ ಜನರಿಗೆ ತೋರಿಸಬೇಕು ಎಂದರು. ಇದೇ ವೇಳೆ ನಬಾರ್ಡ್ ಈ ಬಾರಿ ಶೇ 58ರಷ್ಟು ಕೃಷಿ ಸಾಲವನ್ನು ಕಡಿತಗೊಳಿಸಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಆದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಅನ್ಯಾಯದ ಸಮರ್ಥನೆಗೆ ಇಳಿದಿರುವುದು ನಾಚಿಕೆಗೇಡು. ಇನ್ನು ತಮ್ಮನ್ನು ತಾವು ಮಣ್ಣಿನ ಮಗ, ರೈತರ ಮಗ ಅಂದುಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಬೆಂಗಳೂರಿನ ರಾಜಾನುಕುಂಟೆ ಬಳಿಯ ಖಾಸಗಿ ಕಾಲೇಜಿನಲ್ಲಿ ಬೈಕ್ ಪಾರ್ಕಿಂಗ್ ವಿಚಾರಕ್ಕೆ ವಿದ್ಯಾರ್ಥಿಗಳ ನಡುವಿನ ಗಲಾಟೆಯಾಗಿದ್ದು, ಮೂವರಿಗೆ ಚಾಕುನಿಂದ ಹಲ್ಲೆ ನಡೆಸಲಾಗಿದೆ. ಗಲಾಟೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಮತ್ತೋರ್ವನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೊಂದೆಡೆ ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಕ್ಕಳಾದ ಶುಭಂ ಸಾಹು ಹಾಗೂ ಶಿಯಾ ಸಾಹುಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ತಾಯಿ ಮಮತಾ ಸಾಹು ಚಾಕುನಿಂದ ಕತ್ತು ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇನ್ನು ಮಮತಾ ತಾನು ಕತ್ತುಕುಯ್ದುಕೊಂಡಿರುವ ಫೋಟೋವನ್ನು ಗಂಡನಿಗೆ ಕಳುಹಿಸಿದ್ದಾಳೆ. ಸದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಡ್ರಗ್ಸ್ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ಬೆಂಗಳೂರಿನ ಎರಡು ಪ್ರತ್ಯೇಕ ಕಡೆಗಳಲ್ಲಿ ಭರ್ಜರಿ ದಾಳಿ ನಡೆಸಿ 6 ಕೋಟಿ ಡ್ರಗ್ಸ್ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಹಾಗೂ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಹೊಸವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಡ್ರಗ್ಸ್ ಸಾಗಾಣೆ, ಶೇಖರಣೆ, ಮಾರಾಟದ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸರು ಸೋಲದೇವನಹಳ್ಳಿಯಲ್ಲಿ ಬಾಡಿಗೆಗಿದ್ದ ಇಬ್ಬರು ವಿದೇಶಿ ಡ್ರಗ್‌ಪೆಡ್ಲರ್ಗೊಳನ್ನು ವಶಕ್ಕೆ ಪಡೆದಿದ್ದು ಕೊಕೆನ್, ಎಂಡಿಎಂಎ ಕ್ರಿಸ್ಟಲ್ ಮತ್ತು ಎಕ್ಸ್ ಟೆಸಿ ಪಿಲ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾಗೊಂಡಿದೆ. ಈ ಹಿಂದೆ ಮೂರು ಪ್ರಕರಣಗಳಲ್ಲಿ ಜಾಮೀನು ಅರ್ಜಿ ವಜಾಗೊಂಡಿತ್ತು. ಇದೀಗ ನಾಲ್ಕನೇ ಪ್ರಕರಣದ ಜಾಮೀನು ಅರ್ಜಿಯನ್ನು ಸಹ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ. ಮೂರು ಅತ್ಯಾಚಾರ ಪ್ರಕರಣ, ಒಂದು ಅಶ್ಲೀಲ ದೃಶ್ಯ ಪ್ರಕರಣದ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಅಶ್ಲೀಲ ದೃಶ್ಯ ಪ್ರಕರಣ ಸೇರಿದಂತೆ ಇತರೆ ಒಟ್ಟು ನಾಲ್ಕು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಆಗಸ್ಟ್ನಲ್ಲಿ 2,144 ಪುಟಗಳ ಚಾರ್ಜ್ಶೀಟ್ ಸಲ್ಲಿಸಿತ್ತು. ಆ ಬಳಿಕ ಪ್ರಜ್ವಲ್ ರೇವಣ್ಣ ಜಾಮೀನಿಗಾಗಿ ನಡೆಸಿದ ನಿರಂತರ ಪ್ರಯತ್ನಗಳನ್ನು ವಿಫಲವಾಗಿವೆ.
Advertisement