ಬೆಂಗಳೂರು: ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಈ ಹಿಂದೆ ಮೂರು ಪ್ರಕರಣಗಳಲ್ಲಿ ಜಾಮೀನು ಅರ್ಜಿ ವಜಾಗೊಂಡಿತ್ತು. ನಾಲ್ಕನೇ ಪ್ರಕರಣದ ಆದೇಶ ಬಾಕಿಯಿತ್ತು. ಇದೀಗ ನಾಲ್ಕನೇ ಪ್ರಕರಣದಲ್ಲೂ ಮಾಜಿ ಸಂಸದನಿಗೆ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ನಿರಾಕರಿಸಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ, ಅಶ್ಲೀಲ ವಿಡಿಯೋ ಸೇರಿದಂತೆ ಒಟ್ಟು 4 ಪ್ರಕರಣಗಳಿದ್ದು, 4ನೇ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ, ಜಾಮೀನು ಅರ್ಜಿ ವಜಾ ಮಾಡಿ, ಆದೇಶಿಸಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಇದಾಗಿದ್ದು, ಪ್ರಜ್ವಲ್ ರೇವಣ್ಣ ಅವರು ಸಂತ್ರಸ್ತೆಗೆ ಗನ್ ತೋರಿಸಿ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಅತ್ಯಾಚಾರದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಆನಂತರ ಹಲವು ಬಾರಿ ವಿಡಿಯೋ ಕರೆ ಮಾಡಿ ನಗ್ನವಾಗುವಂತೆ ಸೂಚಿಸಿ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಚಾರವನ್ನು ಬಹಿರಂಗಪಡಿಸಿದಂತೆ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದರು.
Advertisement