ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕಾರಿಗಳು ಮತ್ತಿತರ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಈವರೆಗೂ ಸಿಬಿಐ ನಡೆಸಿರುವ ತನಿಖೆಯ ವಿವರವನ್ನು ಹೈಕೋರ್ಟ್ ಶುಕ್ರವಾರ ಕೇಳಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದಾಖಲಿಸಿರುವ ಪ್ರಕರಣದಲ್ಲಿ ಸಿಬಿಐ ತನಿಖೆ ಚುರುಕುಗೊಳಿಸಬೇಕು ಮತ್ತು ತನಿಖೆಯ ಮೇಲ್ವಿಚಾರಣೆ ಮಾಡಬೇಕು ಎಂದು ಬಿಜೆಪಿ ನಾಯಕರಾದ ಬಸನಗೌಡ ಆರ್ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ ಮತ್ತು ಕುಮಾರ ಬಂಗಾರಪ್ಪ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರು ಸಿಬಿಐಗೆ ನೋಟಿಸ್ ಜಾರಿಗೊಳಿಸಿ ಆದೇಶ ಪ್ರಕಟಿಸಿದರು.
ಅರ್ಜಿದಾರರ ಪರ ವಕೀಲ ವೆಂಕಟೇಶ್ ಪಿ ದಳವಾಯಿ, ಹಣ ಲೂಟಿ ಕುರಿತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೂರು ದಾಖಲಿಸಿ ಐದು ತಿಂಗಳು ಕಳೆದರೂ ಯಾವುದೇ ತನಿಖೆ ಕೈಗೊಂಡಿಲ್ಲ ಎಂದು ವಾದಿಸಿದರು. ಸಿಬಿಐ ಪರ ವಾದಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಪ್ರಸನ್ನ ಕುಮಾರ್, ಹಗರಣ ಕುರಿತು ದೂರು ದಾಖಲಿಸಿಕೊಂಡಿರುವ ರಾಜ್ಯ ಪೊಲೀಸರಿಂದ ವರ್ಗಾವಣೆ ಕೋರಿ ಬ್ಯಾಂಕ್ ದೂರು ದಾಖಲಿಸಿದ ದಿನದಿಂದಲೂ ಸಿಬಿಐ ಕಾಯುತ್ತಿದೆ. ಇದೇ ರೀತಿ ನ್ಯಾಯಾಲಯ ಕೂಡಾ ಇತ್ತೀಚಿಗೆ ತಿರಸ್ಕರಿಸಿತ್ತು ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿಯಲ್ಲಿ ಸಚಿವರು, ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗಿರುವ ಕಾರಣ ಹಣ ದುರುಪಯೋಗದ ದೊಡ್ಡ ಷಡ್ಯಂತ್ರದ ಬಗ್ಗೆ ತನಿಖೆ ಮಾಡದಿರುವ ಸಾಧ್ಯತೆಯಿರುವುದರಿಂದ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಯ ಅಗತ್ಯವಿದೆ ಎಂದು ಅರ್ಜಿದಾರರು ಹೇಳಿದರು.
ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಮಾತ್ರ ನಿಷ್ಪಕ್ಷಪಾತ ತನಿಖೆ ಸಾಧ್ಯ. ಆದ್ದರಿಂದ ಜೂನ್ 3, 2024 ರಂದು ದಾಖಲಾದ ಅಪರಾಧವನ್ನು ತನಿಖೆ ಮಾಡಲು ಸಿಬಿಐಗೆ ನಿರ್ದೇಶನವನ್ನು ನೀಡಬೇಕು ಮತ್ತು ನ್ಯಾಯಾಲಯದ ಮುಂದೆ ಅಂತಿಮ ವರದಿಯನ್ನು ಸಲ್ಲಿಸಬೇಕು ಮತ್ತು ವಿಚಾರಣೆಯನ್ನು ತ್ವರಿತಗೊಳಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದರು.
Advertisement