ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆ, ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮಿತ್ರಪಕ್ಷ 288 ಸ್ಥಾನಗಳ ಪೈಕಿ 234 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಹುಮತ ಪಡೆದಿದ್ದರೆ, ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ 50 ಸ್ಥಾನಗಳನ್ನಷ್ಟೇ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 81 ವಿಧಾನಸಭಾ ಕ್ಷೇತ್ರಗಳಿರುವ ಜಾರ್ಖಂಡ್ ನಲ್ಲಿ ಜೆಎಂಎಂ ನೇತೃತ್ವದ ಇಂಡಿ ಮೈತ್ರಿಕೂಟ 56 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟ 24 ಸ್ಥಾನಗಳನ್ನು ಗೆದ್ದಿದೆ. ಇನ್ನು ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳನ್ನೂ ಆಡಳಿತಾರೂಢ ಕಾಂಗ್ರೆಸ್ ಗೆದ್ದಿದೆ. ಚನ್ನಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ ಕುಮಾರಸ್ವಾಮಿ ವಿರುದ್ಧ ಸಿ.ಪಿ ಯೋಗೇಶ್ವರ್, ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿರುದ್ಧ ಯಾಸೀರ ಅಹಮದ್ ಖಾನ್ ಪಠಾಣ್, ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ವಿರುದ್ಧ ಇ ಅನ್ನಪೂರ್ಣ ಅವರು ಗೆಲುವು ಸಾಧಿಸಿದ್ದಾರೆ.
ಉಪಚುನಾವಣೆ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಜನತಾ ನ್ಯಾಯಾಲಯದಲ್ಲಿ ನಾವು ಗೆದ್ದಿದ್ದೇವೆ ಎಂದು ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಗೆಲುವಿನ ಕ್ರೆಡಿಟ್ ನ್ನು ಗ್ಯಾರೆಂಟಿ ಯೋಜನೆಗಳಿಗೆ ನೀಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ನನ್ನ ಮತ್ತು ನನ್ನ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿತು. ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಅಪಪ್ರಚಾರ ಮಾಡಿದ್ದರು. ಆದರೆ, ನಮ್ಮ ಗ್ಯಾರಂಟಿ ಮತ್ತು ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜನರು ಮತ ನೀಡಿದ್ದಾರೆ. ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್ ಉಪಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಣದ ಹೊಳೆ ಹರಿಸಿ ಕಾಂಗ್ರೆಸ್ ಗೆದ್ದಿದೆ, ಇದರಲ್ಲಿ ಚಮತ್ಕಾರವೇನೂ ಇಲ್ಲ ಎಂದು ಹೇಳಿದ್ದಾರೆ. ಇನ್ನು ತಮ್ಮ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಖಿಲ್ ಕುಮಾರಸ್ವಾಮಿ, ಸೋಲನ್ನು ಸ್ವೀಕರಿಸುತ್ತೇನೆ, ಸೋತಿದ್ದೇನೆ ಎಂದು ಸುಮ್ಮನೇ ಕೂರುವುದಿಲ್ಲ. ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರೆ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ತಮ್ಮ ಪ್ರತಿಷ್ಠೆಗೆ ಅವರ ಮಗ ನಿಖಿಲ್ ಕುಮಾರಸ್ವಾಮಿಯನ್ನು ಬಲಿಕೊಟ್ಟಿದ್ದಾರೆ. ನಿಖಿಲ್ ಕುಮಾರಸ್ವಾಮಿ ,ಸೋಲಿನ ಮೂಲಕ ಜೆಡಿಎಸ್ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ಸಿಪಿ ಯೋಗೇಶ್ವರ್ ಹೇಳಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಹಿಂದೂ ಮಹಾಸಾಗರದಲ್ಲಿ ಚಂಡಮಾರುತ ಪರಿಚಲನೆ ಉಂಟಾಗಿದ್ದು, ಪರಿಣಾಮ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ನವೆಂಬರ್ 27ರಿಂದ ಮಳೆಯಾಗುವ ಸಾಧ್ಯತೆ ಇದೆ.
ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಿಳೆ ಜೀವಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಚಾರಣೆ ನೆಪದಲ್ಲಿ ಸಿಐಡಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ರ ಬರೆದಿಟ್ಟಿದ್ದಾರೆ. ವಕೀಲಿ ವೃತ್ತಿ ನಡೆಸುತ್ತಿದ್ದ ಆರೋಪಿ, ನಿಗಮದ ಫಲಾನುಭವಿಗಳಿಗೆ ವಿವಿಧ ಸಾಮಗ್ರಿಗಳನ್ನು ಪೂರೈಕೆ ಮಾಡಿದ್ದರು. ಹಾಗಾಗಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದರು. ಗುರುವಾರ ವಿಚಾರಣೆಗೆ ಹಾಜರಾಗಿ ಮನೆಗೆ ವಾಪಸ್ ಆಗಿದ್ದರು. ಈ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಹಲವು ವಾಹನಗಳು ಜಖಂಗೊಂಡಿವೆ. ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಬೆಳ್ಳಂಬೆಳಗ್ಗೆ ಖಾಸಗಿ ಬಸ್, ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದೆ. ಬೆಂಗಳೂರು ಮೂಲದ ಕಾಲೇಜು ವಿದ್ಯಾರ್ಥಿಗಳು ಖಾಸಗಿ ಬಸ್ನಲ್ಲಿ ಕುಂದಾಪುರಕ್ಕೆ ಪ್ರವಾಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನು ನೆಲ್ಯಾಡಿ ಮತ್ತು ಕಡಬದ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.
Advertisement