"ಹೆಣ್ಣು ಪ್ರಗತಿ ಹೊಂದಿದರೆ ಒಂದು ಕುಟುಂಬ ಪ್ರಗತಿ ಹೊಂದಿದಂತೆ. ರಾಜ್ಯ, ಹಳ್ಳಿ ಪ್ರಗತಿಯಾದಂತೆ. ಆದ ಕಾರಣಕ್ಕೆ ನಮ್ಮ ಗ್ಯಾರಂಟಿ ಯೋಜನೆಗಳು ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿರುವಂತೆ ರೂಪಿಸಲಾಗಿದೆ" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಕನಕಪುರದಲ್ಲಿ ಭಾನುವಾರ ನಡೆದ ಕನಕಾಂಬರಿ ಮಹಿಳಾ ಒಕ್ಕೂಟದ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ಮೈತ್ರಿ ಸರ್ಕಾರ ನಮ್ಮ ಗೃಹಲಕ್ಷ್ಮೀ ಯೋಜನೆಯನ್ನೇ ನಕಲು ಮಾಡಿ 'ಮಾಝಿ ಲಡಕಿ ಬಹಿನ್ ಯೋಜನಾ' ಎಂದು ಹೆಸರಿಟ್ಟು 1,500 ರೂಪಾಯಿಯನ್ನು ಕೊಟ್ಟಿದ್ದರು. ನಾವು ಮಹಾಲಕ್ಷ್ಮಿ ಎನ್ನುವ ಹೆಸರಿಟ್ಟು 3,000 ಸಾವಿರ ಕೊಡುವುದಾಗಿ ಭರವಸೆ ನೀಡಿದ್ದೆವು. ಆದರೆ ಅಲ್ಲಿನ ಬಿಜೆಪಿ ಮೈತ್ರಿ ಸರ್ಕಾರ ಚುನಾವಣೆಗೆ ಆರು ತಿಂಗಳು ಮುಂಚಿತವಾಗಿ ಹಣ ನೀಡಿದ ಪರಿಣಾಮ ನಮಗಿಂತ ಅವರಿಗೆ ಹೆಚ್ಚು ಮತಗಳು ಬಂದವು ಎಂದು ಹೇಳಿದ್ದಾರೆ.
ಸಾಮಾನ್ಯ ಮಹಿಳೆಯರು ಮುಂದೆ ಬರಬೇಕು
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ಮುಖಂಡರುಗಳು ತಮ್ಮ ಹೆಂಡತಿ, ತಂಗಿ, ಅಕ್ಕ ಅಥವಾ ಸಂಬಂಧಿಕರನ್ನು ನಿಲ್ಲಿಸುತ್ತಿದ್ದಾರೆ. ಸಾಮಾನ್ಯ ಮಹಿಳೆಯರು ಅಧಿಕಾರದ ಗದ್ದುಗೆ ಇರಲು ಮುಂದಕ್ಕೆ ಬರಬೇಕು ಎಂದು ಕರೆ ನೀಡಿದ್ದಾರೆ.
ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆಗೆ ಒಪ್ಪಿಗೆ ದೊರೆತಿದೆ. ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಶೇಕಡ 33ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಬೇಕಾಗಬಹುದು. ಅದಕ್ಕಾಗಿ ಸಾಮಾನ್ಯ ಮಹಿಳೆಯರು ಈಗಿನಿಂದಲೇ ತಮ್ಮಲ್ಲಿರುವ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಿ.
ಸ್ತ್ರೀಶಕ್ತಿ ಸಂಘಗಳಿಗೆ ಮುನ್ನುಡಿ ಬರೆದಿದ್ದೆ ನಾವು
ಎಸ್ಎಂ. ಕೃಷ್ಣ ಅವರ ಸಂಪುಟದಲ್ಲಿ ನಾನು ಸಹಕಾರ ಸಚಿವನಾಗಿದ್ದೆ. ಆಗ ಈ ಸ್ತ್ರೀ ಶಕ್ತಿ ಸಂಘಗಳಿಗೆ ಮುನ್ನುಡಿ ಬರೆದಿದ್ದೆ ನಾವು. ಸಹಕಾರ ಇಲಾಖೆಯ ಅಡಿಯಲ್ಲಿ ಬರುವ ಡಿಸಿಸಿ ಬ್ಯಾಂಕ್ ನೇತೃತ್ವದಲ್ಲಿ ಸ್ವಸಹಾಯ ಗುಂಪುಗಳಿದ್ದವು, ಇವುಗಳನ್ನೇ ಸ್ತ್ರೀಶಕ್ತಿ ಸಂಘಗಳೆಂದು ಪರಿವರ್ತಿಸಿ, ಸಚಿವರಾಗಿದ್ದ ಮೋಟಮ್ಮ ಅವರಿಗೆ ನೇತೃತ್ವ ನೀಡಲಾಯಿತು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಹಿಳೆಯರ ಆರ್ಥಿಕ ಸ್ಥಿತಿ ಆರೋಗ್ಯವಾಗಿರಬೇಕು
ಸ್ತ್ರೀ ಶಕ್ತಿ ಸಂಘಗಳು ಮಾಡಿದ ಪರಿಣಾಮವಾಗಿ ಹೆಣ್ಣು ಮಕ್ಕಳು ಮನೆಯಲ್ಲಿ ಇರುತ್ತಿಲ್ಲ ಇಂದು ಅನೇಕ ನಾಯಕರು ನನಗೆ ಬೈದರು. ಮನೆಯಲ್ಲಿ ಹೆಣ್ಣಿಗೆ ಆರ್ಥಿಕವಾಗಿ ಶಕ್ತಿ ಕೊಡಬೇಕು ಎಂದು ಈ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತೆ. ಹೆಣ್ಣು ಕುಟುಂಬದ ಕಣ್ಣು. ಕುಟುಂಬದಲ್ಲಿ ಹೆಣ್ಣಿನ ಮನಸ್ಥಿತಿ, ಪರಿಸ್ಥಿತಿ ಆರೋಗ್ಯವಾಗಿ ಇದ್ದರೆ, ನಾವೆಲ್ಲರೂ ಆರೋಗ್ಯವಾಗಿ ಇದ್ದಂತೆ. ಪುರುಷರೂ ಇದಕ್ಕೆ ಕೊಡುಗೆ ಕೊಡಬೇಕು ಎಂದು ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
Advertisement